ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವ ಕುರಿತು ನಾಗರಿಕರಿಂದ ಹೆಚ್ಚುತ್ತಿರುವ ದೂರುಗಳ ಹಿನ್ನೆಲೆ, ನಗರಸಭೆಯು ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ನಗರಸಭೆಯ ಪ್ರಕಟಣೆಯ ಪ್ರಕಾರ, ಅನಧಿಕೃತವಾಗಿ ರಸ್ತೆಯ ಬದಿಗಳು, ಶಾಲಾ ಆವರಣಗಳು, ಬಸ್ ನಿಲ್ದಾಣಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ಹಾಕುವುದು ನಿಷಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯು ಪ್ರಾಥಮಿಕ ಹಂತದಲ್ಲಿ ನಿಯೋಜಿತ ಪ್ರದೇಶಗಳನ್ನು ಗುರುತಿಸಿದ್ದು, ಬೀಡಿನ ಗುಡ್ಡೆ ಹಿಂದೂ ರುದ್ರಭೂಮಿ ಎದುರುಗಡೆ, ಆದಿ ಉಡುಪಿ ಮಾರುಕಟ್ಟೆ ಹಿಂಬದಿ, ಇಂದ್ರಾಳಿ ಹಿಂದೂ ರುದ್ರಭೂಮಿ ಎದುರುಗಡೆ, ಪರ್ಕಳ ಸ್ವಾಗತ ಗೋಪುರದ ಹತ್ತಿರ, ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕದ ಎದುರುಗಡೆ, ಪೆರಂಪಳ್ಳಿ ಮುಖ್ಯರಸ್ತೆಯ ಭರತೀಯ ವಿಕಾಸ ಟ್ರಸ್ಟ್ ಕೆಳಗಡೆ, ಆದಿ ಉಡುಪಿ-ಮಲ್ಪೆ ರಸ್ತೆಯ ಹೆಲಿಪ್ಯಾಡ್ ಹತ್ತಿರ, ಕಕ್ಕುಂಜೆ ನಾರಾಯಣನಗರ ತಿರುವು, ಮತ್ತು ಬೈಲೂರು ವಿಜಯವೀರ ಸಂಘದ ಹತ್ತಿರ ಸ್ಥಳಗಳನ್ನು ಆಹಾರ ನೀಡಲು ಅನುಮೋದಿಸಲಾಗಿದೆ.

ಸಾರ್ವಜನಿಕರು ಈ ಸ್ಥಳಗಳನ್ನು ಹೊರತುಪಡಿಸಿ ಯಾವುದೇ ಬೇರೆ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಬಾರದು. ಬೇರೆ ಸ್ಥಳಗಳಲ್ಲಿ ಆಹಾರ ಹಾಕಲು ಬಯಸುವವರು ನಗರಸಭೆಗೆ ಲಿಖಿತ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕೆಂದು ಸೂಚಿಸಲಾಗಿದೆ. ಅದೇ ರೀತಿ, ನಾಯಿಗಳಿಗೆ ಆಹಾರ ನೀಡುವವರಿಗೆ ನಗರಸಭೆಯಿಂದ ಗುರುತಿನ ಚೀಟಿ ಮತ್ತು ಅನುಮತಿ ಪತ್ರ ಕಡ್ಡಾಯವಾಗಿದ್ದು, ಅವರು ಆಹಾರ ನೀಡುವ ನಾಯಿಗಳಿಗೆ ರೇಬೀಸ್ ಲಸಿಕೆ ಮತ್ತು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಿದೆ. ನಗರಸಭೆಯು ಮನೆಯಲ್ಲಿನ ಸಾಕು ನಾಯಿಗಳ ಮಾಲೀಕರಿಗೂ ಎಚ್ಚರಿಕೆ ನೀಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿಗಳನ್ನು ಅಥವಾ ಅದರ ಮರಿಗಳನ್ನು ಬಿಟ್ಟುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.



