ಉಡುಪಿ: ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯ ನಡೆಸಲು ಲಂಚದ ಬೇಡಿಕೆ ಇಟ್ಟ ಉಡುಪಿ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ಮತ್ತು ಪ್ರಥಮ ದರ್ಜೆ ಸಹಾಯಕನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಬಂಧಿತರು. ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ಆರೋಪಿಗಳು ತಲಾ 5000 ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಒಪ್ಪದ ಶಾಂತಿನಿಕೇತನ ಸೌಹರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ ಈ ಕುರಿತು ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸ್ ರು ರೇಣುಕಾ ಉಡುಪಿ ಕಚೇರಿಯಲ್ಲಿ ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಪ್ರಭಾರ ಪೊಲೀಸ್ ಉಪಾಧೀಕ್ಷಕ ಮಂಜುನಾಥ್ ಶಂಕರಹಳ್ಳಿ, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್. ಹಾಗೂ ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಹಾಗೂ ಉಡುಪಿ ಲೋಕಾಯುಕ್ತ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ, ಪುಷ್ಪಾವತಿ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್, ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿ ಭಾಗವಹಿಸಿದ್ದರು.