ಉಡುಪಿ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಿಡುಗಡೆಯಾದ ಸಬ್ಸಿಡಿ ಹಣಕ್ಕೆ ಸಂಬಂಧಿಸಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಉಡುಪಿ ಮೀನುಗಾರಿಕೆ ಇಲಾಖೆಯ ಸೂಪರ್ವೈಸರ್ ಶಿವಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮೀನು ವ್ಯಾಪಾರಿ ರಮೇಶ್ ತಿಂಗಳಾಯ ಅವರು ಯೋಜನೆಯಡಿ ಸಣ್ಣ ಟೆಂಪೋ ರಿಕ್ಷಾ ಖರೀದಿಸಿದ್ದು, ಇದಕ್ಕೆ ಸಂಬಂಧಿಸಿದಂತೆ 1.20 ಲಕ್ಷ ರೂ. ಸಬ್ಸಿಡಿ ಬಿಡುಗಡೆಯಾಗಿತ್ತು. ಈ ಹಣದಲ್ಲಿ ಕಮಿಷನ್ ರೂಪದಲ್ಲಿ 10 ಸಾವಿರ ರೂ. ನೀಡುವಂತೆ ಶಿವಕುಮಾರ್ ಬೇಡಿಕೆ ಇಟ್ಟಿದ್ದರೆಂದು ದೂರಲಾಗಿದೆ. ಆರೋಪಿಯ ಬೇಡಿಕೆಯಂತೆ ರಮೇಶ್ ತಿಂಗಳಾಯ ಗೂಗಲ್ ಪೇ ಮೂಲಕ 10 ಸಾವಿರ ರೂ. ಲಂಚ ನೀಡಿದ್ದು, ಬಳಿಕ ಲಂಚಕ್ಕೆ ವಿರೋಧವಾಗಿ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ಮಂಗಳೂರು ಪ್ರಭಾರ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ, ಉಡುಪಿ ಲೋಕಾಯುಕ್ತ ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.



