ಉಡುಪಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ಸಬ್ಸಿಡಿ ಸಾಲ ಕೊಡಿಸುವ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ರಹ್ಮಾವರ ತಾಲ್ಲೂಕು ಆರೂರು ಗ್ರಾಮದ ಕೌಸಲ್ಯಾ ಎಂಬ ಮಹಿಳೆಯನ್ನು ಪೊಲೀಸ್ ರು ಬಂಧಿಸಿದ್ದಾರೆ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ಸಬ್ಸಿಡಿ ಲೋನ್ ಕೊಡಿಸುವ ಭರವಸೆ ನೀಡಿ, ಅರ್ಜಿದಾರರಿಂದ ಹಂತ ಹಂತವಾಗಿ ಹಣ ಸಂಗ್ರಹಿಸಲಾಗುತ್ತಿತ್ತು. ಈ ನೆಪದಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ವಂಚನೆ ನಡೆದಿದೆ. ಬ್ರಹ್ಮಾವರ ತಾಲ್ಲೂಕಿನ ಹೆರಾಡಿ ಗ್ರಾಮದ ಸರಿತಾ ಲೂಯಿಸ್ ಅವರು 80.72 ಲಕ್ಷ ರೂಪಾಯಿ ಹಾಗೂ ಅವರ ಸಂಬಂಧಿಯಾದ ಅಂಜಲಿನ್ ಡಿಸಿಲ್ವಾ ಅವರು 65 ಲಕ್ಷ ರೂಪಾಯಿ ವಂಚನೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ಕುರಿತು ತನಿಖೆ ನಡೆಸಿದಾಗ ಕೌಸಲ್ಯಾ, ಆಕೆಯ ಪತಿ ಸಂದೇಶ್, ಹಾಗೂ ಪ್ರಕಾಶ್, ಆಶೀಷ್ ಶೆಟ್ಟಿ, ರಾಜೇಂದ್ರ ಬೈಂದೂರ್, ಗೀತ, ಹರಿಣಿ, ನವ್ಯ, ಕುಮಾರ್, ಮಾಲತಿ, ಪ್ರವೀಣ್ ಹರಿಪ್ರಸಾದ್, ನಾಗರಾಜ್ ಮತ್ತು ಭಾರತಿ ಸಿಂಗ್ ಎಂಬವರ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿಯಿಂದ ವಂಚನೆಗೆ ಬಲಿಯಾದವರು ಉಡುಪಿ ನಗರ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದು. ಅಲ್ಲದೆ ಈ ಜಾಲದೊಂದಿಗೆ ಸಂಬಂಧ ಹೊಂದಿರುವ ಕೊಕ್ಕರ್ಣೆ ಮತ್ತು ಬೈಂದೂರಿನ ಇಬ್ಬರನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ವಂಚನೆ ಜಾಲದ ಇತರ ಸದಸ್ಯರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ


