ಉಡುಪಿ : ಪೊಡವಿಗೊಡೆಯ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಇಂದು ಕೃಷ್ಣನ ಸಾನಿಧ್ಯದಲ್ಲಿ ಗೋಪೂಜೆ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ನೂರಾರು ಭಕ್ತರ ಸಮುಖದಲ್ಲಿ ನಡೆದ ಈ ಪೂಜಾ ಮಹೋತ್ಸವದಲ್ಲಿ ಪರ್ಯಾಯ ಪುತ್ತಿಗೆ ಮಠದ ಹಿರಿಯ ಸ್ವಾಮೀಜಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಸ್ವಾಮೀಜಿಗಳು ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಗೋಸೇವೆಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದ ಅಂಗವಾಗಿ ಕನಕಗೋಪುರದ ಎದುರು ಪರ್ಯಾಯ ಪುತ್ತಿಗೆ ಮಠದ ಹಿರಿಯ ಸ್ವಾಮೀಜಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಸ್ವಾಮೀಜಿಗಳು ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಗೋವುಗಳಿಗೆ ವಿಶೇಷ ಗೋಗ್ರಾಸವನ್ನು ನೀಡಿದರು.

ನಂತರ ರಥಬೀದಿಯ ಸುತ್ತಲೂ ಗೋವುಗಳ ವೈಭವದ ಮೆರವಣಿಗೆ ನಡೆಯಿತು. ಅನಂತರ ಶ್ರೀ ಕೃಷ್ಣ ಮಠದ ಆವರಣದಲ್ಲಿ ಸಂಕಲ್ಪ ಪೂರ್ವಕ ಸಾಮೂಹಿಕ ಗೋಪೂಜೆ ನಡೆಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಗೋಪೂಜೆಯ ಫಲವನ್ನು ಪಡೆದರು.

ಪೂಜಾ ಕಾರ್ಯಕ್ರಮದಲ್ಲಿ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹಾಗೂ ಅನೇಕ ಮಠಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು. ಗೋಸೇವೆ, ಗೋಪೂಜೆ ಮತ್ತು ಭಕ್ತಿಯ ಸಂಯೋಜನೆಯ ಕ್ಷಣವು ಶ್ರೀಕೃಷ್ಣ ಮಠದ ಆವರಣದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು..
