ಉಡುಪಿ: ಹಿಂದೆ ಮನೆಗಳಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನಮಾನವಿತ್ತು. ಮನೆಯೇ ವಿದ್ಯಾಲಯವಾಗಿತ್ತು. ಇಂದು ಕೌಟುಂಬಿಕ ವ್ಯವಸ್ಥೆಯೇ ಬದಲಾದಂತೆ ಸಂಸ್ಕೃತಿಗೂ ಕುತ್ತು ಬರುತ್ತಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥರು ಅಭಿಪ್ರಾಯಪಟ್ಟರು. ಪರ್ಯಾಯ ಪುತ್ತಿಗೆ ಮಠದ ವತಿಯಿಂದ ರಾಜಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಪುತ್ತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಠಮಾನ್ಯಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕಾಗಿ ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಾರೆ. ಹಾಗಾಗಿ ಸಂಸ್ಕಾರವಂತರನ್ನು ಸೃಷ್ಟಿಸುವಲ್ಲಿ ಮಠಗಳ ಜವಾಬ್ದಾರಿಯೂ ಇದೆ ಎಂದರು. ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥರು ಮಾತನಾಡಿ, ನಮ್ಮ ಮುಂದಿನ ಪೀಳಿಗೆ ಹೇಗಿರಬೇಕು. ಮುಂದಿನ ಪೀಳಿಗೆ ಧಾರ್ಮಿಕವಾಗಿರಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಹೇಳಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರತೀರ್ಥರು ಉಪಸ್ಥಿತರಿದ್ದರು.