ಉಡುಪಿ : ಪ್ರತಿಭೆಗೆ ಯಾವುದೇ ತಾರತಮ್ಯವಿಲ್ಲ. ಕಡು ಬಡವನಲ್ಲೂ ಪ್ರತಿಭೆ ಅಡಗಿದೆ. ಸಮಾಜದ ಶೋಷಿತ ವರ್ಗಗಳ ಪ್ರತಿಭೆಗಳಿಗೆ ಸರಕಾರ, ಇಲಾಖೆ ಹಾಗೂ ಸಮಾಜದ ಪ್ರೋತ್ಸಾಹ ಅತ್ಯಂತ ಅಗತ್ಯ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು. ಅವರು ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆಗಳ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಹಮ್ಮಿಕೊಂಡಿದ್ದ ಕಲಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಶೋಷಿತ ವರ್ಗಗಳ ಯುವಕರು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಅವರು ಹೇಳಿದರು. ಭಾರತೀಯ ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳು ಶಕ್ತಿಶಾಲಿಯಾಗಿದ್ದು, ಇವುಗಳಿಗೆ ಸೂಕ್ತ ವೇದಿಕೆ ಮತ್ತು ಬೆಂಬಲ ನೀಡಬೇಕೆಂದರು. ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲಾ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಜಾನಪದ ಕಲೆ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲಾಗುರುಗಳಾದ ರಮೇಶ್ ಕಲ್ಮಾಡಿ ಮತ್ತು ಗಣೇಶ್ ಬಾರ್ಕೂರು ಅವರನ್ನು ಗೌರವಿಸಲಾಯಿತು. ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಉತ್ತರ ಕನ್ನಡದ ಹಾಲಕ್ಕಿ ಕುಣಿತ, ಕೋಲಾಟ, ಕೊರಗ ಸಮುದಾಯದ ಡೊಳ್ಳು ಕುಣಿತ ಮತ್ತು ಕಂಗೀಲು ನೃತ್ಯಗಳು ಸಭಿಕರ ಗಮನ ಸೆಳೆದವು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಮಾಂಜಿ ನಮ್ಮಭೂಮಿ ನಿರೂಪಣೆ ಮಾಡಿದರು.



