ಉಡುಪಿ : ಕಾಪು ತಾಲೂಕಿನ ಶಿರ್ವಾ ಗ್ರಾಮದ ಬಂಟಕಲ್ಲು ಪ್ರದೇಶದಲ್ಲಿ ನಡೆದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳತನ ನಡೆಸಿದ್ದ ಆರೋಪಿಯನ್ನು ಪೊಲೀಸ್ ರು ಬಂದಿಸಿದ್ದಾರೆ. ಬೈಂದೂರು ಮೂಲದ ರಶೀದ್ ಅಲಿಯಾಸ್ ರಶೀದ್ ಮೊಯಿದ್ದೀನ್ (40) ಬಂಧಿತ ಆರೋಪಿ.

ಲೂಯಿಸ್ ಮಥಾಯಿಸ್ ಎಂಬವರ ಮನೆಯ ಬಳಿ ಇಟ್ಟಿದ್ದ ಕಬ್ಬಿಣದ ಶೀಟ್‌ಗಳನ್ನು ಅಕ್ಟೋಬರ್ 3ರಿಂದ 6ರ ಮದ್ಯಾವಧಿಯಲ್ಲಿ ಕಳವು ಮಾಡಲಾಗಿದ್ದು, ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಕುರಿತು ತನಿಖೆ ನಡೆಸಿದ ಪೊಲೀಸ್ ರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಆರೋಪಿಯು ಶಿರ್ವ, ಪಂಜಿಮಾರ್, ಎಲ್ಲೂರು ಮತ್ತು ಕಟ್‌ಬೆಳ್ತೂರ್ ಪ್ರದೇಶಗಳಲ್ಲಿ ಸಹ ಇದೇ ರೀತಿಯ ಕಳ್ಳತನಗಳನ್ನು ಎಸಗಿರುವುದು ಬಹಿರಂಗವಾಗಿದೆ. ಪೊಲೀಸರು ಆರೋಪಿಯಿಂದ ಒಟ್ಟು 300 ಕಬ್ಬಿಣದ ಶೀಟ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಮಹಿಂದ್ರ ಸುಪ್ರೋ ವಾಹನ ಸೇರಿದಂತೆ ಸುಮಾರು 5.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ತನಿಖೆಯಿಂದ ತಿಳಿದುಬಂದಂತೆ, ಆರೋಪಿಯ ವಿರುದ್ಧ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.