Thursday, October 23, 2025

spot_img

ಶಿಕ್ಷಕರು ಭವ್ಯ ಭಾರತವನ್ನು ನಿರ್ಮಿಸುವ ಶಿಲ್ಪಿಗಳು: ಯಶ್ ಪಾಲ್ ಸುವರ್ಣ

ದೇಶದ ಭವಿಷ್ಯವು ತರಗತಿಯೊಳಗೆ ರೂಪುಗೊಳ್ಳುತ್ತದೆ ಎನ್ನುವ ಮಾತಿದೆ. ವಿದ್ಯಾರ್ಥಿಗಳು ದೇಶದ ಭವಿಷ್ಯ, ಅವರನ್ನು ರೂಪುಗೊಳಿಸುವವರು ಶಿಕ್ಷಕರು. ಶಿಕ್ಷಕರು ಭವ್ಯ ಭಾರತವನ್ನು ನಿರ್ಮಿಸುವ ಶಿಲ್ಪಿಗಳು. ಶಿಕ್ಷಕರು ತಮ್ಮ ಪ್ರಾಮಾಣಿಕ ಸೇವೆಯಿಂದ ಮಕ್ಕಳ ವ್ಯಕ್ತಿತ್ವವನ್ನು ನಿರ್ಮಾಣ ಮಾಡುತ್ತಾರೆ. ಮಣ್ಣಿನಿಂದ ಸುಂದರವಾದ ಮೂರ್ತಿಯನ್ನು ರೂಪಿಸುವಂತೆ ಶಿಕ್ಷಕರೂ ಕೂಡಾ ಮಕ್ಕಳನ್ನು ತಿದ್ದಿ ತೀಡಿ ದೇಶದ ಆಸ್ತಿಯನ್ನಾಗಿ ರೂಪಿಸುವಲ್ಲಿ ತಮ್ಮ ಕೊಡುಗೆ ನೀಡುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ದೇಶದ ಭವಿಷ್ಯವನ್ನೂ ರೂಪಿಸುತ್ತಾರೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಅಭಿಪ್ರಾಯ ಪಟ್ಟರು.

ಅವರು ಶುಕ್ರವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉಡುಪಿ ವಲಯ ಹಾಗೂ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ) ಅಂಬಲಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಮತ್ತು ವಲಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ಉಡುಪಿ ಜಿಲ್ಲೆಯು ಶಿಕ್ಷಣಕಾಶಿ ಎಂದು ಹೆಸರುವಾಸಿಯಾಗಿದೆ. ಉತ್ತಮ ಗುಣಮಟ್ಟದ, ಶಿಸ್ತು ಬದ್ದ ಶಿಕ್ಷಣ ವ್ಯವಸ್ಥೆಯಿಂದಾಗಿ ದೇಶ-ವಿದೇಶಗಳಲ್ಲಿ ಹೆಸರು ಮಾಡಿದ್ದು ಜಿಲ್ಲೆಯು ಎಲ್ಲರಿಗೆ ಮಾದರಿಯಾಗಿದೆ. ಈ ಗೌರವವನ್ನು ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಯೋಜಿಸಲಾಗಿದೆ. ಜಿಲ್ಲೆಯ ಶಿಕ್ಷಕರು ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ಪ್ರಶಸ್ತಿಗಳನ್ನು ಪಡೆಯುತ್ತಿದ್ದು ಜಿಲ್ಲೆಯ ಶೈಕ್ಷಣಿಕ ವ್ಯವಸ್ಥೆಯ ಗರಿಮೆಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಶಿಕ್ಷಕರು ಜಿಲ್ಲೆಯ ಶೈಕ್ಷಣಿಕ ಸ್ಥಾನಮಾನಗಳನ್ನು ಕಾಯುಕೊಳ್ಳುವಲ್ಲಿ ಸಹಕರಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯು ಈಗಾಗಲೇ ಶಿಕ್ಷಣದಲ್ಲಿ ಮುಂದಿದ್ದು ಇದಕ್ಕೆ ಶಿಕ್ಷಕರ ಶ್ರಮ ಮತ್ತು ಶೃದ್ದೆಯೇ ಕಾರಣ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಯ ಜೊತೆಗೆ ಜೀವನ ಕೌಶಲ್ಯಗಳಲ್ಲಿಯೂ ಮಾರ್ಗದರ್ಶನ ನೀಡಬೇಕು. ತಮ್ಮ ವೃತ್ತಿ ಜೀವನದ ಅನುಭವವನ್ನು ಧಾರೆ ಎರೆದು ಮಕ್ಕಳಲ್ಲಿ ಮೂಲಭೂತ ನಾಗರಿಕ ಪ್ರಜ್ಞೆ, ವೃತ್ತಿ ಆಧಾರಿತ ಕೌಶಲ್ಯಗಳು, ವೃತ್ತಿ ಸಮಾಲೋಚನೆಗಳು, ಜೀವನ ಶೈಲಿಯ ಪಾಠಗಳನ್ನೂ ಕಲಿಸಿಕೊಡುವ ಜೊತೆಗೆ ಮಕ್ಕಳಲ್ಲಿ ಹುದುಗಿರಬಹುದಾದ ಪ್ರತಿಭೆಗಳನ್ನು ಹುಡುಕಿ ಮುನ್ನೆಲೆಗೆ ತರಲು ಪ್ರಯತ್ನಿಸಬೇಕು. ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಕೂಡಾ ಮಕ್ಕಳನ್ನು ತೊಡಗಿಸಿ ರಾಜ್ಯ, ದೇಶ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಮಿಂಚುವಂತಾಗಬೇಕು ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಪಡೆದ ಶಿಕ್ಷಕರನ್ನು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಲೆಕ್ಕ ಪರಿಶೋಧಕ ಕಮಲಾಕ್ಷ ಕಾಮತ್ ವಿಶೇಷ ಉಪನ್ಯಾಸ ನೀಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಶ್ಯಾಮಿಲಿ.ಜಿ.ಶಂಕರ್,  ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ್ ಶೆಟ್ಟಿ,ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ ಅಶೋಕ್ ಕಾಮತ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ ಸ್ವಾಗತಿಸಿದರು. ಒಳಕಾಡು ಶಾಲೆಯ ಅಧ್ಯಾಪಕ ಗಣಪತಿ ಭಟ್ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles