Thursday, October 23, 2025

spot_img

ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಬೇಕಿಲ್ಲ : ಹೆಬ್ಬಾಳಕರ್ ತಿರುಗೇಟು

ಉಡುಪಿ: ಶಾಸಕ ಸುನೀಲ್ ಕುಮಾರ್ ಅವರಿಂದ ನೈತಿಕ ಪಾಠ ಕಲಿಯಬೇಕಿಲ್ಲ.‌ ನೈತಿಕ ಅಧಿಕಾರ ಎಂದರೇನು?. ಅವರು ಮೊದಲು ನೈತಿಕತೆಯ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ಮಾತನಾಡುವ ಸಚಿವರಿಗೆ ನೈತಿಕತೆ ಇಲ್ಲ ಎಂಬ ಸುನೀಲ್ ಕುಮಾರ್ ಅವರ ಆರೋಪಕ್ಕೆ ಶನಿವಾರ ಪ್ರತಿಕ್ರಿಯಿಸಿದ ಸಚಿವರು, ಉಸ್ತುವಾರಿ ಸಚಿವೆಗೆ ನೈತಿಕತೆ ಇಲ್ಲ ಅಂದರೆ ಏನು. ಸುನೀಲ್ ಕುಮಾರ್ ಬಹಳ ಚಂದ ಮಾತುಗಾರರು, ಅವರನ್ನು ಅವರೇ ಬುದ್ಧಿವಂತ, ಸರ್ವಜ್ಞ ಎಂದು ತಿಳಿದುಕೊಂಡಿದ್ದಾರೆ. ಬೇರೆಯವರನ್ನು ದಡ್ಡರು ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿ ಕಾರಿದರು‌.
ಎಷ್ಟು ಅಂಗನವಾಡಿಗಳಿವೆ ಲೆಕ್ಕ ಕೊಡಿ ಎಂದು ಸುನೀಲ್ ಕುಮಾರ್ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸುಮಾರು 69,000 ಅಂಗನವಾಡಿ ಕಟ್ಟಡ ಇದೆ, 12,000 ಕಟ್ಟಡ ಬಾಡಿಗೆಯಲ್ಲಿದೆ. ಸುನೀಲ್ ಕುಮಾರ್ ಬಗ್ಗೆ ನಾನು ಎಲ್ಲಾ ಮಾತನಾಡಬೇಕಾ?. ನನ್ನ ಇಲಾಖೆ ಬಗ್ಗೆ ಕೇಳ್ತೀರಾ? ಬನ್ನಿ ನಿಮಗೆ ನಾನು ಎಲ್ಲಾ ಡೀಟೇಲ್ಸ್ ಕೊಡುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸವಾಲು ಹಾಕಿದರು. ರಾಜ್ಯದಲ್ಲಿ ಅಂಗನವಾಡಿಗಳು ಎಷ್ಟಿವೆ. ಕಾರ್ಯಕರ್ತರು ಎಷ್ಟಿದ್ದಾರೆ ಎಲ್ಲಾ ನನಗೆ ಗೊತ್ತು. ಬಾಡಿಗೆ ಕಟ್ಟಡ ಎಷ್ಟು? ಸ್ವಂತ ಕಟ್ಟಡ ಎಷ್ಟು? ಹಳ್ಳಿಯಲ್ಲಿ ಎಷ್ಟಿದೆ! ಪೇಟೆಯಲ್ಲಿ ಎಷ್ಟಿದೆ ಎಷ್ಟು ಸೋರುತ್ತಿದೆ ಎಲ್ಲವೂ ಗೊತ್ತು. ನಿಮ್ಮ ಕ್ಷೇತ್ರದಲ್ಲಿ ಎಷ್ಟು ಇದೆ ಅನ್ನೋದು ಗೊತ್ತು ಎಂದರು‌. ಪ್ರತಿಭಟನೆಗೆ ಪ್ರಾಮುಖ್ಯತೆ ಇದೆ, ವಿರೋಧ ಪಕ್ಷಕ್ಕೆ ಮಾಡಲು ಬೇರೆ ಕೆಲಸ ಇಲ್ಲ ಪ್ರತಿಭಟನೆ ಮಾಡಲಿ, ಜಿ ಎಸ್ ಟಿ ತರಲು ಆಗಿಲ್ಲ. ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಅದರ ವಿರುದ್ಧ ಪ್ರತಿಭಟನೆ ಮಾಡಲಿ, ಅಸಮರ್ಥ ಸಂಸದರ ಬಗ್ಗೆ ಪ್ರತಿಭಟನೆ ಮಾಡಲಿ ಎಂದರು.

ನರೇಗಾ ಹಣ ಬಿಡುಗಡೆಯಾಗಿಲ್ಲ, ಅದರ ಬಗ್ಗೆ ಪ್ರತಿಭಟನೆ ಮಾಡಲು ಸಾಧ್ಯವೇ, ಜನರ ದಿಕ್ಕು ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಪಕ್ಷದ ಆಂತರಿಕ ಕಚ್ಚಾಟಗಳನ್ನು ಮುಚ್ಚಿಹಾಕಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬಿಜೆಪಿಯ ಡ್ರಾಮಾ.‌ ಬಿಜೆಪಿಯ ಕಾರ್ಯಕರ್ತರೇ ಬೇಸತ್ತು ಹೋಗಿದ್ದಾರೆ. ಹೋದಲ್ಲಿ ಬಂದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.‌ ಜನರ‌ ದಿಕ್ಕು ತಪ್ಪಿಸಲು ಹೋರಾಟ, ಪ್ರತಿಭಟನೆ ಮಾಡಿ, ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಆರೋಪಿಸಿದರು.

ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಗೆ ಬಾಗಲಕೋಟೆಗೆ ಮೂರು ತಿಂಗಳು ಬ್ಯಾನ್ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವ ವಾಗ್ಮಿಗಳನ್ನು, ಭಾಷಣಕಾರರನ್ನು ನಾವು ಟಾರ್ಗೆಟ್ ಮಾಡುತ್ತಿಲ್ಲ‌. ಯಾವುದೇ ವಿಷಯಗಳು ವಿಷಯಧಾರಿತವಾಗಿರಬೇಕು, ವಿಷಯಾಂತರ ಆಗಬಾರದು ಎಂದರು‌. ಸಮಾಜದ ಕೋಮು ಸೌಹಾರ್ದತೆ ಕೆಡಿಸಬಾರದು ಹಿತಾಸಕ್ತಿ ಕಾಪಾಡಬೇಕು. ವಿಷ ಬೀಜ ಬಿತ್ತಿ ಸಮಾಜ ಒಡೆಯಬಾರದು. ಅಂತವರ ವಿರುದ್ಧ ಕಾನೂನು ಕ್ರಮ ಆಗುತ್ತದೆ. ಶ್ರೀಕಾಂತ ಶೆಟ್ಟಿ ಹಿಂದಿನ ಭಾಷಣಗಳನ್ನು ತೆಗೆದು ನೋಡಬೇಕು. ಆಗ ಎಲ್ಲ ವಿಚಾರ ಅರಿವಾಗುತ್ತೆ ಎಂದು ಹೇಳಿದರು ‌

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles