ಉಡುಪಿ : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಉಡುಪಿಯ ಮಲ್ಪೆಯಲ್ಲಾದ ಘಟನೆಗೆ ಸ್ಪಂದಿಸಿದ ಬಳಿಕ ಉಡುಪಿ ಶಾಸಕರಿಗೆ ಘಟನೆಯ ನೆನಪಾಯಿತೋ. ? ರಾಜ್ಯದ ಮೂಲೆ ಮೂಲೆಗಳಲ್ಲಿ ನಡೆದ ಘಟನೆಗಳ ಬಗ್ಗೆ ಸ್ಪಂದಿಸುವ ಶಾಸಕರು ತಮ್ಮ ಕಾಲ ಬುಡದಲ್ಲಿ ನಡೆದ ಘಟನೆಗೆ ಸ್ಪಂದಿಸಲು ಇಷ್ಟು ವಿಳಂಬ ನೀತಿ ಏಕೆ ? ಎಂದು ನ್ಯಾಯವಾದಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಅರುಣ್ ಕುಂದರ್ ಕಲ್ಗದ್ದೆ ಪ್ರಶ್ನಿಸಿದ್ದಾರೆ.
ಮಹಿಳೆಗೆ ಮಾಡಿದ ಹಲ್ಲೆಯನ್ನ ನೀವು ಖಂಡಿಸಿರುವುದು ಸ್ವಾಗತಾರ್ಹ, ಅದರ ಜೊತೆಗೆ ಮೀನುಗಾರಿಕಾ ಬಂದರು ನ ಬಂದರಿನ ಸಮಸ್ಯೆ ಈ ಘಟನೆಯ ಬಳಿಕ ನಿಮಗೆ ಕಂಡಿರುವುದು ಹಾಸ್ಯಾಸ್ಪದ. ಮಲ್ಪೆ ಸರ್ವ ಋತು ಬಂದರಿನ ಸ್ವಾಗತ ಕಮಾನಿ ಬಳಿ ಹಲವು ದಶಕಗಳಿಂದ ಕೊಳಚೆ ತುಂಬಿ ಗಬ್ಬು ನಾರುತ್ತಿದೆ. ಬಂದರಿಗೆ ಸ್ವಾಗತ ಕೋರುವ ಸ್ವಾಗತ ಗೋಪುರದ ಬಳಿ ಇಷ್ಟು ಸಾಂಕ್ರಾಮಿಕ ರೋಗ ಹರಡುವ ರೀತಿಯಲ್ಲಿ ಕೊಳಚೆ ನಿಂತಿದ್ದರು. ಅದೇ ದಾರಿಯಲ್ಲಿ ನಿತ್ಯ ಸಂಚರಿಸುವ ಶಾಸಕರು ಗಮನಿಸಿಲ್ಲವೇ ? ಹಲವು ಬಾರಿ ಮಲ್ಪೆ ಬಂದರಿನಲ್ಲಿ ಅಗ್ನಿ ಆಕಸ್ಮಿಕಗಳು ಸಂಭವಿಸಿದಾಗ ಸೂಕ್ತ ಅಗ್ನಿಶಾಮಕ ವಾಹನದ ವ್ಯವಸ್ಥೆ ಇಲ್ಲದೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರದಾಡುತ್ತಿರುವುದು ಗಮನಿಸಿಯೂ ಕೂಡ ಕಣ್ಣು ಮುಚ್ಚಿ ಕುಳಿತಿದ್ದ ಶಾಸಕರು, ಮಾಧ್ಯಮಗಳ ವರದಿಯ ಬಳಿಕ ಅಗ್ನಿಶಾಮಕ ಕಚೇರಿಗೆ ಹೊಸ ವಾಹನ ಮಂಜೂರಾದ ಬಳಿಕ ಬ್ಯಾನರ್ ಹಾಕಿ ತಮ್ಮದೇ ಸಾಧನೆ ಎನ್ನುವಂತೆ ಬಿಂಬಿಸುತ್ತೀರಿ. ಹಾಗಾದರೆ ಮೀನುಗಾರಿಕಾ ಸಮುದಾಯದಲ್ಲಿ ಹುಟ್ಟಿ ಮೀನುಗಾರಿಕಾ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿರುವ ನಿಮಗೆ ಮೀನುಗಾರರ ಸಮಸ್ಯೆ ಕಾಣಿಸುತ್ತಿಲ್ಲವೇ ಸದನದಲ್ಲಿ ಕೋಳಿ ಅಂಕದ ವಿಚಾರ ಪ್ರಸ್ತಾಪಿಸಲು ತೋರಿದ ಆಸಕ್ತಿ, ಮೀನುಗಾರಿಕಾ ಸಮುದಾಯದ ಸಮಸ್ಯೆಗಳ ಪರಿಹಾರ ದ ಕುರಿತು ನೀವು ತೋರಿಸಿಲ್ಲ. ಒಂದು ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಇರುವಾಗ ಇಂತಹ ಘಟನೆಗಳು ನಡೆದಾಗ ತಕ್ಷಣ ಅನ್ಯಾಯಕ್ಕೆ ಒಳಗಾದವರ ಪರ ನಿಲ್ಲಬೇಕಾಗಿದ್ದ ನೀವು ಇಷ್ಟು ವಿಳಂಬ ನೀತಿ ಅನುಸರಿಸಿರುವುದು ನೋಡಿದರೆ ಇಲ್ಲಿ ನಿಮ್ಮ ಪಕ್ಷದ ಅಥವಾ ನಿಮ್ಮವರು ಯಾರಾದರು ಪ್ರಕರಣದಲ್ಲಿ ಭಾಗಿಯಾಗಿದ್ದರೆ ? ಎನ್ನುವ ಪ್ರಶ್ನೆ ಮೂಡುತ್ತಿದೆ. ಮುಖಭಂಗವಾಗುದನ್ನು ತಪ್ಪಿಸಲು ಕೊನೆಯಲ್ಲಿ ಹೇಳಿಕೆ ನೀಡಿದಂತಿದೆ. ಶಾಸಕರಾಗಿ ಇನ್ನಾದರೂ ಸದನದಲ್ಲಿ ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಪೂರಕವಾದ ಯೋಜನೆಗಳನ್ನು ತರುವ ಕುರಿತು ನಿಮ್ಮ ಆಸಕ್ತಿ ಬೆಳೆಸಿಕೊಳ್ಳಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.