ಉಡುಪಿ : ಮಾದಕ ದ್ರವ್ಯ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಉಡುಪಿ ಜಿಲ್ಲೆಯು 3ನೇ ಸ್ಥಾನದಲ್ಲಿದೆ. ಕಾಲೇಜಿನ ಮುಖ್ಯಸ್ಥರು ಹಾಗೂ ಪೊಲೀಸ್ ಇಲಾಖೆಯು ಸಂಪರ್ಕದಲ್ಲಿದಾಗ ವಿದ್ಯಾರ್ಥಿಗಳು ಮಾದಕ ವಸ್ತುವಿನ ಬಲೆಗೆ ಬೀಳಲು ಹಿಂಜರಿಯಬಹುದು. ಆದ್ದರಿಂದ ಪ್ರತಿಯೊಂದು ಕಾಲೆಜುಗಳಲ್ಲಿ ಆಂಟಿ ಡ್ರಗ್ ಕಮಿಟಿ ಪ್ರಾರಂಭಿಸಬೇಕಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಹೇಳಿದರು.

ಅವರು ಬನ್ನಂಜೆ ಶ್ರೀನಾರಾಯಣಗುರು ಸಭಾಭವನದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸಹಯೋಗದೊಂದಿಗೆ “ನಶೆಯಿಂದ ಉಷೆಯೆಡೆಗೆ, ನಶೆಮುಕ್ತ ಭಾರತದತ್ತ ನಮ್ಮ ಚಿತ್ತ” ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ನಿಯಂತ್ರಣಕ್ಕಾಗಿ ರಚಿಸಲಾದ “ಆಂಟಿ ಡ್ರಗ್ ಕಮಿಟಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಸಿ ಮಾತನಾಡಿದರು. ಈ ಕಮಿಟಿಯಲ್ಲಿ ಕಾಲೇಜಿನ ಪ್ರಾಂಶುಪಾಲರು, ಇಬ್ಬರು ಸ್ಟಾಫ್ ಹಾಗೂ 3 ವಿದ್ಯಾರ್ಥಿಗಳನ್ನೊಳ ಕೊಂಡಿರಬೇಕು. ಕಮಿಟಿಗೆ ಸರಹದ್ದಿನ ಠಾಣಾಧಿಕಾರಿ ಅಂದರೆ ಪೊಲೀಸ್ ನಿರೀಕ್ಷಕರು ಅಥವಾ ಪೊಲೀಸ್ ಉಪನಿರೀಕ್ಷಕರು ನೋಡಲ್ ಅಧಿಕಾರಿಯಾಗಿರುತ್ತಾರೆ. ಪ್ರತೀ ತಿಂಗಳು ಕಮಿಟಿ ಮಿಟಿಂಗ್ ಹಾಗೂ ಜಾಗೃತಿ ಕಾರ್ಯಕ್ರಮ, ವಾಕಥಾನ್ ಮುಂತಾದ ಸರಳ ಕಾರ್ಯಕ್ರಮಗಳನ್ನು ಆಯೋಜಿಸಬೇಕಿದೆ. ಮಿಟಿಂಗ್‌ಗೆ ಸರಹದ್ದಿನ ಠಾಣೆಯಿಂದ ಯಾರನ್ನಾದರೂ ಕರೆಯಿಸತಕ್ಕದ್ದು ಹಾಗೂ ಪ್ರತೀ 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿಯವರನ್ನು ಮೀಟಿಂಗ್‌ಗೆ ಕರೆಯಿಸತಕ್ಕದ್ದು. ಮಾದಕ ವಸ್ತು ಜಾಲವನ್ನು ಭೇದಿಸುವಲ್ಲಿ ಯಾರಾದರೂ ಮಾಹಿತಿ ನೀಡಿದಲ್ಲಿ, ವಿದ್ಯಾರ್ಥಿಗಳು ಅಥವಾ ಕಾಲೆಜುಗಳ ಹೆಸರನ್ನು ಬಹಿರಂಗಪಡಿಸದೇ ಗುಪ್ತವಾಗಿರಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಪೆ ಸರಕಾರಿ ಪದವಿಪೂರ್ವ ಕಾಲೇಜು ಪಾಂಶುಪಾಲ ವರ್ಗೀಸ್.ಬಿ., ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದ, ಐಪಿಎಸ್, ಡಿವೈಎಸ್‌ಪಿ ಪ್ರಭು ಡಿಟಿ ಮತ್ತು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಮಲ್ಪೆ ಪೊಲೀಸ್ ವೃತ್ತನಿರೀಕ್ಷಕ ರಾಮಚಂದ್ರ ನಾಯಕ್ ಸ್ವಾಗತಿಸಿದರು. ಹೆಚ್ಚವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್ ನಾಯ್ಕ್ ವಂದಿಸಿದರು.