ಕಾರ್ಕಳ : ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ನಡೆದಿದೆ. ಕಾರ್ಕಳದ ಉದ್ಯಮಿ, ಕಾರ್ಕಳ ಪುರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ದಿಲೀಪ್ ಎನ್. ಆರ್. ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟವರು.

ಕಾರ್ಕಳ ತೆಳ್ಳಾರು ರಸ್ತೆ ನಿವಾಸಿಯಾಗಿದ್ದ ದಿಲೀಪ್ ಅವರು ಮಂಗಳೂರು, ಮುಂಬೈ ಹಾಗೂ ಹೈದರಾಬಾದ್ ನಲ್ಲಿ ಹೋಟೆಲ್ ಉದ್ಯಮ ನಡೆಸಿದ್ದರು. ನಿನ್ನೆ ಮಂಗಳೂರಿನಿಂದ ಕಾರಿನಲ್ಲಿ ಕಾರ್ಕಳಕ್ಕೆ ಹೊರಟಿದ್ದರು, ತನ್ನ ಸ್ನೇಹಿತರಿಗೆ ಹಾಗೂ ಆಪ್ತರಿಗೆ ವಾಟ್ಸಪ್‌ನಲ್ಲಿ ನಾನು ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ ಎಂದು ಮೇಸೇಜ್ ಕಳುಹಿಸಿದ್ದರು. ಕಾರ್ಕಳ ಮೂಲದ ಮುಂಬೈಯ ಉದ್ಯಮಿಯೊಬ್ಬರು ಮೇಸೆಜ್ ನೋಡಿ ಮೃತರ ಅಣ್ಣನಿಗೆ ವಿಷಯ ತಿಳಿಸಿದಾಗ, ದಿಲೀಪ್ ರನ್ನು ಸಂಪರ್ಕಿಸಲು ಪ್ರಯತ್ನಪಟ್ಟಾಗ ಯಾವುದೇ ಸುಳಿವು ಸಿಗದೆ, ಪೋಲಿಸರ ಸಹಾಯದಿಂದ ಹುಡುಕಾಟ ಪ್ರಾರಂಬಿಸಿ ಮೊಬೈಲ್ ನಂಬರ್ ಲೊಕೇಶನ್ ಆಧಾರದಲ್ಲಿ ಹುಡುಕಾಡಿದಾಗ ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಕಾರು ಪತ್ತೆಯಾಗಿದೆ. ಕಾರನ್ನು ಪರಿಶೀಲಿಸಿದಾಗ ದಿಲೀಪ್ ವಿಷ ಸೇವಿಸಿ ತನ್ನ ಸರ್ವೀಸ್ ರಿವಾಲ್ವರ್ ನಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಉದ್ಯಮದಲ್ಲಿ ನಷ್ಟವನ್ನು ಕೂಡ ಅನುಭವಿಸಿದ್ದ ದಿಲೀಪ್ ಅವರಿಗೆ ಕಿಡ್ನಿ ಸಂಬಂಧಿತ ಕಾಯಿಲೆ ಇತ್ತು. ಕಾಯಿಲೆ ಉಲ್ಬಣಗಳ್ಳುತ್ತಿರುವ ಹಿನ್ನಲೆಯಲ್ಲಿ ಮಾನಸಿಕವಾಗಿ ತುಂಬಾ ನೊಂದಿದ್ದರು, ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂದು ವಿಷ ಸೇವನೆ ಮಾಡಿ ನಂತರದಲ್ಲಿ ಪರವಾನಿಗೆ ಪಡೆದ ರಿವಾಲ್ವರಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪಿ ಎಸೈ ಪ್ರಸನ್ನ ಪ್ರಕರಣ ದಾಖಲಿಸಿ, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.


