ಕುಂದಾಪುರ: ಎಲ್ಲಾ ವಿದ್ಯಾರ್ಥಿಗಳು ವೈದ್ಯರು ಅಥವಾ ಇಂಜಿನಿಯರ್‌ಗಳಾಗಬೇಕೆಂಬ ಅಗತ್ಯವಿಲ್ಲ. ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಭವಿಷ್ಯದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಅಭಿಪ್ರಾಯಪಟ್ಟರು.

ಹೆಮ್ಮಾಡಿ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಜನತಾ ಅವಿಷ್ಕಾರ್ 2ಕೆ25 – ಬಿಸಿನೆಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾರುಕಟ್ಟೆಯ ಬಗ್ಗೆ ಅಧ್ಯಯನ ಮಾಡಿ ವ್ಯವಹಾರ ರೂಪಿಸುವುದು ಒಂದು ಕಲೆ ಎಂದು ಅವರು ಹೇಳಿ, ವಿದ್ಯಾರ್ಥಿ ಜೀವನದಲ್ಲೇ ವ್ಯವಹಾರಿಕ ಚಾತುರ್ಯ ಬೆಳೆಸಲು ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದರು.

ವಿದ್ಯಾರ್ಥಿ ವ್ಯವಹಾರ ಮಳಿಗೆಯನ್ನು ಉದ್ಘಾಟಿಸಿದ ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ವಿಜ್ಞಾನ, ವಾಣಿಜ್ಯ, ಕಲಾ – ಎಲ್ಲ ಕ್ಷೇತ್ರಗಳಲ್ಲಿಯೂ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ, ಕನಿಷ್ಠ ಹತ್ತು ಜನರಿಗೆ ಉದ್ಯೋಗ ಕೊಡುವ ಮಟ್ಟಕ್ಕಾದರೂ ಬೆಳೆಯಬೇಕು. ಗುರಿ, ಶ್ರಮ ಮತ್ತು ನಿಷ್ಠೆ ಇದ್ದರೆ ವ್ಯವಹಾರದಲ್ಲಿ ಯಶಸ್ಸು ಖಚಿತ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ. ಗೋಪಾಲ ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಚಿತ್ರಾ ಕಾರಂತ್, ರಾಜಾರಾಮ ಗುರೂಜಿ, ಅನಿತಾ ಆರ್.ಕೆ. ಮರವಂತೆ, ಕಿರಣ್ ದೇವಾಡಿಗ, ಚಂದ್ರ ಕುಂದರ್, ಯೋಗೀಂದ್ರ ತಿಂಗಳಾಯ, ಉದಯ್ ಕುಮಾರ್ ಹಟ್ಟಿಯಂಗಡಿ, ಚೇತನ್ ಕುಮಾರ್ ಹಳ್ಳಿಹೊಳೆ, ರಾಘವೇಂದ್ರ ಕುಲಾಲ್ ಸೇರಿದಂತೆ ಗಣ್ಯರು ಹಾಜರಿದ್ದರು.

ಈ ಸಂದರ್ಭದಲ್ಲಿ ಜಿ. ಶಂಕರ್, ಆನಂದ ಸಿ. ಕುಂದರ್, ರಾಜಾರಾಮ ಗುರೂಜಿ ಅವರಿಗೆ ಸನ್ಮಾನ ದೊರೆಯಿತು. ಸ್ಪರ್ಧೆಗಳಿಗೆ ತೀರ್ಪುಗಾರಿಕೆಯನ್ನಾಳಿದ ಸಾಮಾನ್ಯ ಮತ್ತು ವಿಶಿಷ್ಟ ಅತಿಥಿಗಳನ್ನು ಸಹ ಗೌರವಿಸಲಾಯಿತು. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಪ್ರಾಸ್ತಾವಿಕ ಭಾಷಣ ಮಾಡಿದರು. ಅಭಿಲಾಷ್ ಕ್ಷತ್ರಿಯ ಸ್ವಾಗತಿಸಿ, ಉದಯ್ ನಾಯ್ಕ್ ನಿರೂಪಿಸಿ, ಉಪಪ್ರಾಂಶುಪಾಲ ರಮೇಶ್ ಪೂಜಾರಿ ವಂದಿಸಿದರು.

ಕಾರ್ಯಕ್ರಮದಲ್ಲಿ 115 ವಿದ್ಯಾರ್ಥಿ ಮಾರಾಟ ಮಳಿಗೆಗಳನ್ನು ಆರಂಭಿಸಿ ವ್ಯಾಪಾರ ನಡೆಸಿದರು. ಈ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.



