ಕುಂದಾಪುರ : ಯಕ್ಷಗಾನ ಕಲಾರಂಗ ಕುಂದಾಪುರ ತಾಲೂಕಿನ ಕೋಟೇಶ್ವರದ ಕುಂಬ್ರಿಯ ವಿದ್ಯಾಪೋಷಕ್ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಪೃಥ್ವಿಗೆ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಜರಗಿತು. ಉದಯವಾಣಿಯ ನಿವೃತ್ತ ಉಪಸಂಪಾದಕ, ಪ್ರಕೃತ ಬೆಂಗಳೂರಿನಲ್ಲಿರುವ ಹಾರ್ಯಾಡಿ ಮಂಜುನಾಥ ಭಟ್ಟರು ತಮ್ಮ ತಾಯಿ ಗಂಗಾ ಲಕ್ಷ್ಮೀನಾರಾಯಣ ಭಟ್ಟರು ಮತ್ತು ಅತ್ತೆ ಐರೋಡಿ ಭಾಗೀರಥಿ ನಾಗಪ್ಪಯ್ಯ ಅಲ್ಸೆ ಇವರ ಸ್ಮರಣಾರ್ಥ ಪ್ರಾಯೋಜಿಸಿದ ‘ಗಂಗಾ ಭಾಗೀರಥಿ’ ಮನೆಯನ್ನು ಬೆದ್ರಾಡಿ ಗಣಪತಿ ಭಟ್ಟರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ತನ್ನ ಕಾರ್ಯಕ್ಷಮತೆಯಿಂದ ಕಲಾರಂಗವು ಸಮಾಜದ ವಿಶ್ವಾಸವನ್ನು ಗಳಿಸಿ, ಯಾರಲ್ಲೂ ಯಾಚಿಸದೆ, ಕಲೆ, ಕಲಾವಿದರು, ಶಿಕ್ಷಣ ಮತ್ತು ಸಮಾಜಕ್ಕಾಗಿ ನಿರಂತರ ಕಾರ್ಯ ನಿರ್ವಹಿಸಿತ್ತಿರುವುದು ಬೆರಗು ಹುಟ್ಟಿಸುತ್ತದೆ ಎಂದು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ನನ್ನ ತಾಯಿ ಗಂಗಾ ಮತ್ತು ಅತ್ತೆ ಭಾಗೀರಥಿ ಪ್ರತಿಕೂಲ ಸಂದರ್ಭದಲ್ಲಿ ಸಂಸಾರವನ್ನು ಮುನ್ನಡೆಸಿದ ಕಷ್ಟ ಜೀವಿಗಳು. ನಾವು ಶಿಕ್ಷಣಕ್ಕಾಗಿ ಪಟ್ಟ ಪಾಡು ಉಳಿದವರಿಗೆ ಬಾರದಿರಲಿ ಎಂಬ ನೆಲೆಯಲ್ಲಿ ನನ್ನ ಮಕ್ಕಳಾದ ಅರವಿಂದ ಮತ್ತು ನಯನಾ ವಿದ್ಯಾಪೋಷಕ್‌ಗೆ ನಿರಂತರವಾಗಿ ಆರ್ಥಿಕ ನೆರವನ್ನು ನೀಡುತ್ತಾ ಬರುತ್ತಿರುವುದು ತಂದೆಯಾಗಿ ನನಗೆ ಹೆಮ್ಮೆಯ ಸಂಗತಿ. ಈ ಅವಕಾಶ ಕಲ್ಪಿಸಿದ ಕಲಾರಂಗಕ್ಕೆ ನಾವು ಋಣಿಗಳು, ಎಂದು ದಾನಿಗಳಾದ ಮಂಜುನಾಥ ಭಟ್ಟರ ಹೇಳಿದರು. ಅವರ ಪುತ್ರ ಅರವಿಂದ ಭಟ್ ಮಾತನಾಡಿ, ಕಲಾರಂಗ ನಾಡಿಗೇ ಮಾದರಿಯಾದ ಸಾಮಾಜಿಕ ಸಾಂಸ್ಕೃತಿಕ ಸಂಘಟನೆ ಇಂತಹ ಸಂಸ್ಥೆಯನ್ನು ಮಕ್ಕಳಾದ ನಮಗೆ ಪರಿಚಯಿಸಿದವರೆ ನಮ್ಮ ತೀರ್ಥರೂಪರು ಎಂದರು.

ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟಿಗೆ ಕೊಲ್ಲೂರು ದೇವಳದಿಂದ ಕೊಡಮಾಡಿದ 5 ಲಕ್ಷ ರೂಪಾಯಿ ಅನುದಾನದ ಚೆಕ್ಕನ್ನು ದೇವಳದ ಟ್ರಸ್ಟಿ, ಸಹನಾದ ಮಾಲಕರಾದ ಸುರೇಂದ್ರ ಶೆಟ್ಟಿ ಅವರು ಸಂಸ್ಥೆಗೆ ಹಸ್ತಾಂತರಿಸಿದರು. ಹಾರ್ಯಾಡಿ ಶಿವರಾಮ ಭಟ್, ಐರೋಡಿ ಶ್ರೀನಿವಾಸ ಅಲ್ಸೆ, ಯಜ್ಞನಾರಾಯಣ ಅಲ್ಸೆ, ಮಂಜುನಾಥ ಅಲ್ಸೆ, ರಾಘವೇಂದ್ರ ರಾವ್, ಶ್ರೀಧರ ಭಟ್ ಹಾಗೂ ಮಂಜುನಾಥ ಭಟ್ಟರ ಕುಟುಂಬಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಉದ್ಯಮಿಗಳಾದ ಅರುಣ್ ಕುಮಾರ್ ಶೆಟ್ಟಿ ಅಮೇರಿಕಾದ ಶ್ರೀವತ್ಸ ಬಲ್ಲಾಳ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಸಂತೋಷ ಕುಮಾರ್ ಶೆಟ್ಟಿ, ಎಚ್. ಎನ್. ವೆಂಕಟೇಶ್, ಕೆ. ಅಜಿತ್ ಕುಮಾರ್, ಗಣಪತಿ ಭಟ್, ನಾಗರಾಜ ಹೆಗಡೆ ಪಾಲ್ಗೊಂಡರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.