ಉಡುಪಿ: ಆತ ಗಾಂಜಾ ವ್ಯಸನಿ, ಹೆಸರು ಅಕ್ರಂ,ನನ್ನ ಮಗಳನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಪರಿಚಯಿಸಿಕೊಂಡು ಆಕೆಯ ಸ್ನೇಹ ಸಂಪಾದಿಸಿ, ಬ್ಲಾಕ್ಮೇಲ್ ಮಾಡಿ ಮಾ.20 ರಂದು ಅಪಹರಿಸಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ, ಪೋಲಿಸರು ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ ಎಂದು ಯುವತಿಯ ತಾಯಿ ಪುಷ್ಪಲತಾ ಸೆರೋಸ್ ಅಳಲನ್ನು ತೋಡಿಕೊಂಡಿದ್ದಾರೆ. ಮಣಿಪಾಲದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿಯನ್ನು ಮೇ.20 ರಂದು ಅಕ್ರಮ್ ಎಂಬಾತ ಅಪಹರಿಸಿದ್ದಾನೆ ಎಂದು ಉಡುಪಿ ನಗರ ಠಾಣೆಯಲ್ಲಿ ಆಕೆಯ ತಂದೆ ಗಾಡ್ವಿನ್ ದೇವದಾಸ್ ದೂರು ದಾಖಲಿಸಿದ್ದರು. ಆದರೆ ಪೋಲಿಸರು ಆರೋಪಿಯನ್ನು ಪತ್ತೆಹಚ್ಚಿ ನನ್ನ ಮಗಳನ್ನು ಹುಡುಕಿಕೊಡುವಲ್ಲಿ ವಿಫಲವಾಗಿದ್ದಾರೆ ಎಂದು ತಾಯಿ ಆಕ್ರೋಶ ಹೊರಹಾಕಿದರು.

2020 ರಲ್ಲಿ ನನ್ನ ಮಗಳಿಗೆ ಅಕ್ರಮ್ ಎಂಬಾತ ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತನಾಗಿ, ಪ್ರೀತಿ ಮಾಡುವಂತೆ ಒತ್ತಾಯಿಸಿ, ಅವಳಿಗೆ 18 ವರ್ಷ ತುಂಬಿದ ಬಳಿಕ ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಮಣ್ಣಪಳ್ಳದಲ್ಲಿ ಆಕೆಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ಕಿರುಕಳ ನೀಡಿದ್ದಕ್ಕೆ ದೂರು ದಾಖಲಿಸಲಾಗಿತ್ತು. ನಂತರ ಆತನು ಜೈಲಿನಲ್ಲಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿ, ಆತನು ಈಗ ರಿವೇಂಜ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ನಡುವೆ ಉಡುಪಿ ಉಪನೋಂದಣಿ ಕಚೇರಿಯಲ್ಲಿ ಅಕ್ರಮ್ ತನ್ನ ಮಗಳನ್ನು ಬೆದರಿಸಿ, ಬ್ಲಾಕ್ಮೇಲ್ ಮಾಡಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದಾನೆ. ನಮ್ಮ ಗಮನಕ್ಕೆ ಈ ವಿಚಾರ ಬಂದ ಬಳಿಕ ನಾವು ದಿಗ್ಮೂಢರಾಗಿ, ದಿಕ್ಕು ತೋಚದಂತಾದೆವು. ಪೋಲಿಸ್ ಇಲಾಖೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ನಮಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ಎಸ್ಪಿಯವರು ನಮ್ಮನ್ನು ಕೂರಿಸಿ ಚೆನ್ನಾಗಿ ಮಾತನಾಡಿದ್ದಾರೆ. ಆದರೆ ಕಾನೂನಿನಂತೆ ಏನು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಇನ್ನು ಯುವತಿಯ ಪೋಷಕರ ಮನೆಗೆ ಆಗಮಿಸಿದ ಇಸ್ಲಾಂ ಮುಖಂಡರು ಪ್ರಕರಣವನ್ನು ವಾಪಾಸು ಪಡೆಯಿರಿ. ನಿಮ್ಮ ಮಗಳನ್ನು ಭೇಟಿ ಮಾಡುವ ಅವಕಾಶವನ್ನು ಮಾಡಿಕೊಡುತ್ತೇವೆ ಎಂದು ಆಮಿಷ ಒಡ್ಡಿದ್ದಾರೆ ಎಂದು ಯುವತಿಯ ಪೋಷಕರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ಮಾ.28 ರಂದು ಹೈಕೋರ್ಟ್‌ನಲ್ಲಿ ಯುವತಿಯ ತಂದೆ ತನ್ನ ಮಗಳನ್ನು ಹುಡುಕಿಕೊಡುವಂತೆ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಕಾಮೇಶ್ವರ್ ರಾವ್ ಹಾಗು ನ್ಯಾ.ನದಾಫ್ ಅವರಿದ್ದ ವಿಭಾಗೀಯ ಪೀಠವು ಎ.4 ರಂದು ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ನಿರ್ದೇಶಿಸಿದೆ. ದೂರುದಾರರ ಪರವಾಗಿ ಹೈಕೋರ್ಟ್ ನ್ಯಾಯವಾದಿ ದಿಲ್‌ರಾಜ್ ರೋಹಿತ್ ಸೀಕ್ವೇರಾ ವಾದಿಸಿದ್ದಾರೆ. ಶುಕ್ರವಾರ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನಾಪತ್ತೆಯಾದ ಯುವತಿ ಹಾಗು ಆಕೆಯನ್ನು ಅಪಹರಿಸಿಕೊಂಡು ಹೋದ ಅಕ್ರಮ್ ಎಂಬಾತನು ನ್ಯಾಯಾಲಯಕ್ಕೆ ತೆರಳಿದ್ದಾರೆ. ಆದರೆ ಅರ್ಜಿ ವಿಚಾರಣೆ ನಡೆದಿದ್ದರಿಂದ ವಿಚಾರಣೆಯನ್ನು ಎ.4 ಕ್ಕೆ ಮುಂದೂಡಿದೆ. ಈ ವೇಳೆ ಉಡುಪಿ ಡಿವೈಎಸ್ಪಿ ಪ್ರಭು ಅವರು ಹಾಜರಿದ್ದರು. ಆರೋಪಿಗೆ ಪೋಲಿಸರೇ ಅರ್ಜಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಯುವತಿಯ ತಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಾಪತ್ತೆಯಾದ ಯುವತಿ ಹಾಗು ಅಕ್ರಮ್ ಮಾ.19 ರಂದು ಜಿಲ್ಲಾ ಎಸ್ಪಿಯವರಿಗೆ ಪತ್ರ ಬರೆದು, ನಾನು ಪ್ರೀತಿಸುತ್ತಿದ್ದು, ಯುವತಿಯ ಮನೆಯವರ ವಿರೋಧ ಇದೆ. ಹೀಗಾಗಿ ನಮಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಬೇಕೆಂದು ಜಿಲ್ಲಾ ಎಸ್ಪಿಗೆ ಪತ್ರದ ಮೂಲಕ ವಿನಂತಿಸಿದ್ದಾರೆ.