ಉಡುಪಿ: ಜಾಗತಿಕ ಮಟ್ಟದಲ್ಲಿ ಯುದ್ಧಗಳು ದೊಡ್ಡ ಮಟ್ಟದ ಸುದ್ದಿಯಾಗುತ್ತಿರುವ ಹಿನ್ನೆಲೆಯಲ್ಲಿಯೇ ಕರಾವಳಿ ಭಾಗದ ಕೋಟ ಸೈಬರ್ ಕಟ್ಟೆ, ಸಾಲಿಗ್ರಾಮ, ಸಾಸ್ತಾನ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಲಘು ವಿಮಾನವೊಂದು ನಿರಂತರ ಹಾರಾಟ ನಡೆಸುತ್ತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಬಹುತೇಕ ಬಿಳಿ ಬಣ್ಣದ ಈ ಲಘು ವಿಮಾನ ಕಳೆದ ಎರಡು ದಿನಗಳಿಂದ ಇದೇ ಪ್ರದೇಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಡಿಮೆ ಎತ್ತರದಲ್ಲಿ ಸಂಚರಿಸುತ್ತಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ವಿಶೇಷವಾಗಿ ಮಧ್ಯಾಹ್ನದ ವೇಳೆಯಲ್ಲಿ ಈ ಹಾರಾಟ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ. ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇತ್ತ ಮಾಧ್ಯಮಗಳಲ್ಲಿ ಯುದ್ಧ ಸಂಬಂಧಿತ ವರದಿಗಳು ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ, ಸ್ಪಷ್ಟನೆ ಕೊರತೆಯಿಂದ ಸ್ಥಳೀಯರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ಮಾಡುತ್ತಿರುವ ಈ ವಿಮಾನದ ದೃಶ್ಯಗಳನ್ನು ಕೆಲವರು ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂಬಂಧಿತ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.



