ಉಡುಪಿ: ಬಡನಿಡಿಯೂರು ಗ್ರಾಮದ ಕಡಲ ತೀರದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಕಾನೂನು ತೊಡಕುಗಳಿಲ್ಲದಿದ್ದರೂ ವೈಯಕ್ತಿಕ ದ್ವೇಷದಿಂದ ಶಾಸಕ ಯಶಪಾಲ್ ಸುವರ್ಣ ಅವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಆರೋಪಿಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಿಂತ ಮೊದಲು ನಾನು ಉದ್ಯಮಿ. ರಾಜಕೀಯ ನನ್ನ ವೃತ್ತಿಯಲ್ಲ, ಪ್ರವೃತ್ತಿ. ಪ್ರವಾಸೋದ್ಯಮ ಬೆಳೆಸುವ ಉದ್ದೇಶದಿಂದ ಕಡಲ ತೀರದ 1.60 ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದು, ಅಗತ್ಯ ಅನುಮತಿಗಳನ್ನು ಕೂಡ ಪಡೆದಿದ್ದೇನೆ” ಎಂದು ಹೇಳಿದರು.

ಸಿಂಗಲ್ ಲೇಔಟ್ ಅನುಮತಿಗಾಗಿ ಎರಡು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಅನುಮತಿ ಸಿಗಲಿಲ್ಲ. ಹೈಕೋರ್ಟ್ ಮೊರೆ ಹೋದರೂ ವಿವಿಧ ಕಾರಣಗಳನ್ನು ನೀಡಿ ನಿರಾಕರಿಸಲಾಯಿತು. ಆದರೆ ಫೆಬ್ರವರಿ 20ರಂದು ಸಿಂಗಲ್ ಲೇಔಟ್ ನೀಡಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬಂದಿದ್ದರೂ, ಒಂದು ತಿಂಗಳಾದರೂ ಅನುಮತಿ ಪತ್ರ ನೀಡಿಲ್ಲ ಎಂದು ಅವರು ಆರೋಪಿಸಿದರು. ನಾನು ಮೂರು ಬಾರಿ ಶಾಸಕನಾಗಿದ್ದಾಗ ಜನರ ಸಮಸ್ಯೆಗಳಿಗೆ ಜಾತಿ, ಧರ್ಮ ನೋಡದೆ ಸ್ಪಂದಿಸಿದ್ದೇನೆ. ಆದರೆ ಈಗ ನನಗೆ ಸಮಸ್ಯೆ ಎದುರಾಗಿದ್ದು, ಕಳೆದ 24 ತಿಂಗಳಿನಿಂದ ವೈಯಕ್ತಿಕ ದ್ವೇಷದಿಂದ ತೊಂದರೆ ನೀಡಲಾಗುತ್ತಿದೆ ಎಂದು ಹೇಳಿದರು. ಶಾಸಕ ಯಶಪಾಲ್ ಸುವರ್ಣ ಅವರ ಹಸ್ತಕ್ಷೇಪದಿಂದ ರೆಸಾರ್ಟ್ ನಿರ್ಮಾಣಕ್ಕೆ ಅಡಚಣೆ ಉಂಟಾಗುತ್ತಿದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ. ನ್ಯಾಯಾಲಯದ ಆದೇಶಕ್ಕೂ ಗೌರವ ನೀಡಲಾಗುತ್ತಿಲ್ಲ. ನಗರಾಭಿವೃದ್ಧಿ ಆಯುಕ್ತರು ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಅವರು ದೂರಿದರು.

ಈ ಹಿನ್ನೆಲೆ ಮಾರ್ಚ್ 23ರಂದು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಸಾತ್ವಿಕ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು. ಸಿಂಗಲ್ ಲೇಔಟ್ ಅನುಮತಿ ನೀಡಬೇಕು, ಇಲ್ಲವಾದರೆ ಹಿಂಬರಹ ನೀಡಬೇಕು. ಹಿಂಬರಹ ನೀಡಿದರೆ ಧರಣಿ ಕೈಬಿಟ್ಟು ಕಾನೂನು ಹೋರಾಟ ಮುಂದುವರಿಸುವುದಾಗಿ ರಘುಪತಿ ಭಟ್ ಹೇಳಿದರು.



