ಉಡುಪಿ : ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಭಾರತೀಯ ರೆಡ್ ಕ್ರಾಸ್ನ ಯುವ ರೆಡ್ಕ್ರಾಸ್ ಘಟಕದ ವಿಶೇಷ
ಶಿಬಿರದ ಸಮಾರೋಪ ಸಮಾರಂಭವು ಇತ್ತೀಚೆಗೆ ನೀಲಾವರದ ಗೋವರ್ಧನ ಗೋಶಾಲೆಯಲ್ಲಿ ನಡೆಯಿತು.
ಸಮಾರೋಪ ಭಾಷಣ ಮಾಡಿದ ಜಿಲ್ಲಾ ರೆಡ್ಕ್ರಾಸ್ ಘಟಕದ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಅವರು ರೆಡ್ಕ್ರಾಸ್ನ ಮೌಲ್ಯಗಳಾದ ಮಾನವೀಯತೆ, ಐಕ್ಯತೆ, ಸ್ವಾತಂತ್ರ್ಯ, ಸಹಬಾಳ್ವೆ, ಏಕತೆಗಳ ಮಹತ್ವವನ್ನು ವಿವರಿಸಿ, ಶಿಬಿರವು ಸ್ವಯಂ ಸೇವಕರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಬೆಳೆಸಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರೆಡ್ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, 160 ವರ್ಷಗಳ ಇತಿಹಾಸವಿರುವ ರೆಡ್ಕ್ರಾಸ್ ಜಗತ್ತಿನಾದ್ಯಂತ ಮಾನವೀಯ ಸೇವೆಗೆ ಹೆಸರಾಗಿದೆ. ಇದರ ಪರಿಚಯವನ್ನು ಸ್ವಯಂ ಸೇವಕರಿಗೆ ಮಾಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ದೀಪಿಕಾ, ಶಿಬಿರಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.