ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಉಡುಪಿ ಜಿಲ್ಲೆ ಮತ್ತು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಗಳ ಸಹಯೋಗದೊಂದಿಗೆ ಇಂದು ಅಜ್ಜರಕಾಡು ರೆಡ್‌ಕ್ರಾಸ್ ಭವನದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲ ಸಿ.ಕೆ. ಮಾತನಾಡಿ, ಸಂಪೂರ್ಣ ಆರೋಗ್ಯ ಎಂದರೆ ಶಾರೀರಿಕ, ಮಾನಸಿಕ, ಸಾಮಾಜಿಕ ಆರೋಗ್ಯವಾಗಿದೆ. ಪ್ರಸಕ್ತ ಸಾಲಿನ ಆರೋಗ್ಯ ದಿನಾಚರಣೆಯ ಘೋಷವಾಕ್ಯವು ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯ ಹಾಗು ಬದುಕುಳಿಯುವಿಕೆಯನ್ನು ಹೆಚ್ಚಿಸುವದರ ಮೇಲೆ ಕೇಂದ್ರಿಕರಿಸುತ್ತದೆ. ಇದರ ಜೊತೆಗೆ ತಪ್ಪಿಸಬಹುದಾದ ತಾಯಂದಿರು ಮತ್ತು ಶಿಶು ಮರಣಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದರು.
ಎ.ವಿ.ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕಾವ್ಯ ಟಿ. ಉಪನ್ಯಾಸ ನೀಡಿ ಮಾತನಾಡುತ್ತಾ, ಜನರಿಗೆ ಸಾಮಾನ್ಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯ. ಈ ಅರಿವಿನಿಂದ ಹಲವು ರೋಗಗಳು ಬರದಂತೆ ತಡೆಯಲು ಸಾಧ್ಯ. ಆಹಾರ, ನಿದ್ರೆ, ಮನೋನಿಗ್ರಹಗಳು ಸದೃಢ ಆರೋಗ್ಯಕ್ಕೆ ಅತಿ ಅಗತ್ಯ ಎಂದರು. ರೆಡ್‌ಕ್ರಾಸ್ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರತ್ನಾ ಸುವರ್ಣ, ರೆಡ್ ಕ್ರಾಸ್ ಆಡಳಿತ ಮಂಡಳಿಯ ಸದಸ್ಯ ಚಂದ್ರಶೇಖರ್, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಇಲಾಖೆಯ ಯೋಜನಾಧಿಕಾರಿ ಶಿವಾಜಿ, ವಿಕಲಚೇತನ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಸ್ವಾಗತಿಸಿ, ನಿರೂಪಿಸಿದರೆ, ರೆಡ್‌ಕ್ರಾಸ್ ಖಚಾಂಚಿ ರಮಾದೇವಿ ವಂದಿಸಿದರು.