ಉಡುಪಿ: ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಭಾಗದ ಸರ್ವಿಸ್ ರಸ್ತೆ ಅಗಲೀಕರಣ ಹಾಗೂ ಸಂಬಂಧಿತ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ರಾ.ಹೆ.66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆ ವತಿಯಿಂದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಅಂಬಲಪಾಡಿಯ ಕಿರಿದಾಗಿರುವ ಸರ್ವಿಸ್ ರಸ್ತೆಯನ್ನು ಮಳೆನೀರು ಹರಿಯುವ ಚರಂಡಿಯೊಂದಿಗೆ ಅಗಲೀಕರಣಗೊಳಿಸುವುದು, ಅಂಡರ್‌ಪಾಸ್‌ನ ಪೂರ್ವ–ಪಶ್ಚಿಮ ಭಾಗಗಳಲ್ಲಿ ಉಡುಪಿ ನಗರವನ್ನು ಸಂಪರ್ಕಿಸುವ ನಗರಸಭೆಯ ರಸ್ತೆಯನ್ನು ಹೆದ್ದಾರಿ ಪ್ಯಾಕೇಜ್ ರಸ್ತೆಯಾಗಿ ಅಗಲೀಕರಣಗೊಳಿಸುವುದು, ಅಂಡರ್‌ಪಾಸ್ ಜಂಕ್ಷನ್ ರಸ್ತೆಯನ್ನು ನಿಯಮಾನುಸಾರ 30 ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿ ಲಘು ಹಾಗೂ ಘನ ವಾಹನಗಳ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡುವುದು ಹಾಗೂ ಫೂಟ್‌ಪಾತ್ ಮೂಲಕ ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಬೇಡಿಕೆ ಇಡಲಾಗಿದೆ.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈ ಬೇಡಿಕೆಗಳನ್ನು ಕೇಂದ್ರ ಹೆದ್ದಾರಿ ಸಚಿವರಿಗೆ ಸಲ್ಲಿಸಿ ಅವುಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ಭಾಸ್ಕರ್ ಶೆಟ್ಟಿ ಕಡೆಕಾರು, ಕಾರ್ಯಕಾರಿ ಸಮಿತಿ ಸದಸ್ಯರಾದ ಹರೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.



