ಉಡುಪಿ : ಕಾರ್ಕಳದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಿ, ಭೂ ಮಾಲೀಕರಿಗೆ ವೈಜ್ಞಾನಿಕ ಮೌಲ್ಯಮಾಪನದ ಆಧಾರದಲ್ಲಿ ಸಮರ್ಪಕ ಪರಿಹಾರವನ್ನು ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ, ಬಜಗೋಳಿ, ಮಾಳ ಭಾಗಗಳಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಹಾಗೂ ಭೂ ಸ್ವಾಧೀನ–ಪರಿಹಾರ ಪಾವತಿ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ 169ಎ ಅಭಿವೃದ್ಧಿಗಾಗಿ ಸ್ಥಳೀಯರು ಹಲವು ವರ್ಷಗಳಿಂದ ವಾಸವಿರುವ ಮನೆಗಳು ಹಾಗೂ ಕೃಷಿ ಭೂಮಿಯನ್ನು ನೀಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭಗಳಲ್ಲಿ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರ ನೀಡಿದರೆ ಮಾತ್ರ ಭೂ ಮಾಲೀಕರು ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಅಂಶಕ್ಕೆ ವಿಶೇಷ ಗಮನ ನೀಡಬೇಕು ಎಂದು ಸಂಸದರು ತಿಳಿಸಿದರು.

ಜಿಲ್ಲಾ ವ್ಯಾಪ್ತಿಯಲ್ಲಿ ಕೈಗೊಂಡಿರುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದರು. ಮಲ್ಪೆ–ಕರಾವಳಿ ಜಂಕ್ಷನ್ ವರೆಗೆ ನಡೆಯಲಿರುವ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನೂ ಚುರುಕುಗೊಳಿಸಿ ಶೀಘ್ರ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಭೂ ಸ್ವಾಧೀನಕ್ಕೆ ಒಳಪಡುವ ಮನೆ, ಕೃಷಿ ಜಮೀನು ಹಾಗೂ ಇತರೆ ಸ್ವತ್ತುಗಳನ್ನು ಅಧಿಕಾರಿಗಳು ನಿಖರವಾಗಿ ಪರಿಶೀಲಿಸಿ, ನೈಜತೆಗೆ ಅನುಗುಣವಾಗಿ ಪ್ರಸ್ತುತ ಮಾರುಕಟ್ಟೆ ಮೌಲ್ಯ ಆಧಾರಿತ ಪರಿಹಾರ ನಿಗಧಿಪಡಿಸುವಂತೆ ಸೂಚನೆ ನೀಡಿದರು.

ಶಾಸಕ ಸುನಿಲ್ ಕುಮಾರ್ ಮಾತನಾಡಿ, ಭೂ ಸ್ವಾಧೀನಕ್ಕೆ ಒಳಗಾಗುವ ಮಾಲೀಕರಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು. ನೆರೆಯ ಜಿಲ್ಲೆಗಳಲ್ಲಿ ಇದೇ ರಾಷ್ಟ್ರೀಯ ಹೆದ್ದಾರಿಗಾಗಿ ನೀಡಿರುವ ಪರಿಹಾರ ಮೊತ್ತ ಹೆಚ್ಚು ಇರುವುದರಿಂದ ಒಂದೇ ರಸ್ತೆಗೆ ಪರಿಹಾರದಲ್ಲಿ ವ್ಯತ್ಯಾಸ ಉಂಟಾಗಿ ಭೂ ಮಾಲೀಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ಆದ್ದರಿಂದ ಕಾನೂನುಬದ್ಧವಾಗಿ ಸಮಾನ ಮತ್ತು ನ್ಯಾಯಸಮ್ಮತ ಪರಿಹಾರವನ್ನು ನಿಗಧಿಪಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿಎಫ್‌ಒ ರುಥ್ರೇನ್ ಪಿ, ಸಹಾಯಕ ಆಯುಕ್ತ ರಶ್ಮಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು, ಗುತ್ತಿಗೆದಾರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.



