Wednesday, October 22, 2025

spot_img

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಗ ಹೆಚ್ಚಿಸಿ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪಾಧಿಕಾರದ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಹೆದ್ದಾರಿ ಕಾಮಗಾರಿಗಳ ವೇಗವನ್ನು ಹೆಚ್ಚಿಸುವುದರೊಂದಿಗೆ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆದ್ದಾರಿ ಅಧಿಕಾರಿಗಳಿಗೆ ಹಾಗೂ ಅಭಿಯಂತರರುಗಳಿಗೆ ಸೂಚನೆ ನೀಡಿದರು. ನಗರದ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾ.ಹೆ 66 ಮತ್ತು 169ಎ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂತೆಕಟ್ಟೆ ಕಲ್ಯಾಣಪುರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯನ್ನು ಹೆಚ್ಚುಸುವುದರೊಂದಿಗೆ ಶೀಘ್ರವಾಗಿ ಸಂಪೂರ್ಣ ಕಾಮಗಾರಿ ಮುಗಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅಂಬಲಪಾಡಿ ಜಂಕ್ಷನ್ ನಲ್ಲಿ ಫ್ಲೈ-ಓವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಮುಂದಾಗಬೇಕು ಎಂದ ಅವರು ಕಾಮಗಾರಿಯಿಂದ ಗೋಪುರದ ಹತ್ತಿರ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಕಟಪಾಡಿಯಲ್ಲಿ ಫ್ಲೈ-ಓವರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಈಗಾಗಲೇ ಉದ್ದೇಶಿಸಲಾಗಿದೆ. ಕಾಮಗಾರಿಯನ್ನು ನವೆಂಬರ್ ಮೊದಲನೇ ವಾರದಿಂದ ಪ್ರಾರಂಭಿಸಬೇಕು. ಕಾಮಗಾರಿ ವೇಳೆ ಹೆದ್ದಾರಿ ಬಂದ್ ಆಗುವ ಹಿನ್ನೆಲೆ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ಅನುಗುಣವಾಗಿ ಅಗತ್ಯ ಕ್ರಮ ವಹಿಸಬೇಕು, ನಾಳೆಯಿಂದಲೇ ಹೆದ್ದಾರಿಯಲ್ಲಿರುವ ವಿದ್ಯುತ್ ತಂತಿ ಕಂಬಗಳ ಸ್ಥಳಾಂತರ ಕಾರ್ಯವನ್ನು ಪ್ರಾರಂಭಿಸಬೇಕು ಈ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸ್ಥಳಿಯ ಸಂಸ್ಥೆಗಳ ಸಹಕಾರ ಪಡೆಯಬೇಕು. ರಾ. ಹೆದ್ದಾರಿ ಇಬ್ಬಾಗದಲ್ಲಿ ಸರ್ವಿಸ್ ರಸ್ತೆ ಕಾಮಗಾರಿಯ ಪ್ರಗತಿಯನ್ನು ಹೆಚ್ಚಿಸಬೇಕು. ಅರಣ್ಯ ಇಲಾಖೆಯಿಂದ ಮರಗಳ ತೆರವಿಗೆ ತ್ವರಿತವಾಗಿ ಅನುಮತಿ ಪಡೆದು ತೆರವು ಗೊಳಿಸಬೇಕು ಎಂದರು.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬಳಿ ಬೀದಿ ದೀಪ ಅಳವಡಿಸಬೇಕು. ಈಗಾಗಲೇ ಗುರುತಿಸಿರುವ 22 ಬ್ಲಾಕ್ ಸ್ಪಾಟ್‌ಗಳಲ್ಲಿ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಅಪಘಾತಗಳನ್ನು ಕಡಿಮೆಗೊಳಿಸಿ ಅಪಘಾತ ಮುಕ್ತ ವಲಯವಾಗಿಸಲು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು, ಕಾಪು ಮತ್ತು ಪಡುಬಿದ್ರಿಯಲ್ಲಿ ಮಾತ್ರ ಕ್ರಮ ವಹಿಸಲಾಗಿದೆ. ಬಾಕಿ ಉಳಿದ ಬ್ಲಾಕ್ ಸ್ಪಾಟ್‌ಗಳಲ್ಲಿ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೂಡಲೇ ಕೈಗೊಳ್ಳಬೇಕು. ಕೇವಲ ಟೋಲ್ ವಸೂಲಿಗೆ ಸೀಮಿತವಾಗದೆ ಹೆದ್ದಾರಿ ನಿರ್ವಹಣಾ ಕಾಮಗಾರಿಗಳನ್ನು ನಡೆಸಲು ಮುಂದಾಗಬೇಕು ಎಂದ ಅವರು ಹೆದ್ದಾರಿಯಲ್ಲಿ ಓವರ್ ಸ್ಪೀಡ್ ವಾಹನಗಳನ್ನು ಗುರುತಿಸಲು ಕ್ಯಾಮರಾ ಅಳವಡಿಕೆಯನ್ನು ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ ಇದಕ್ಕೆ ಅಗತ್ಯವಿರುವ ವಿದ್ಯುತ್‌ಚ್ಛಕ್ತಿ ಸೌಲಭ್ಯ ಮತ್ತು ಇತರ ಅಗತ್ಯ ಕಾಮಗಾರಿಗಳನ್ನು ಹೆದ್ದಾರಿ ಅಧಿಕಾರಿಗಳು ಕೈಗೊಳ್ಳಬೇಕು ಎಂದರು.

169 ಎ ಮಲ್ಪೆಯಿಂದ ಕರಾವಳಿ ಜಂಕ್ಷನ್‌ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ 2.2 ಕಿಮೀ ಈಗಾಗಲೇ ಪ್ರಗತಿಯಲ್ಲಿದೆ. ಸದರಿ ಕಾಮಗಾರಿಗೆ ಅಗತ್ಯವಿರುವ ಬಾಕಿ ಉಳಿದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕ್ರಮ ವಹಿಸಬೇಕು. ಭೂ ಮಾಲೀಕರಿಗೆ ವೈಜ್ಞಾನಿಕವಾಗಿ ಪರಿಹಾರದ ಹಣವನ್ನು ಕೂಡಲೇ ನೀಡಲು ಕ್ರಮ ವಹಿಸಬೇಕು. ಕಾರ್ಕಳ ತಾಲೂಕಿನ 169 ಎ ಗೆ ಸಂಬಂಧಿಸಿದಂತೆ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫುಲ್ಕೇರಿ ಬೈಪಾಸ್ ಮುರತ್ತಂಗಡಿ ಪದವಿ ಪೂರ್ವ ಕಾಲೇಜಿನವರೆಗೆ 6 ಬಸ್ ನಿಲ್ದಾಣಗಳಿದ್ದು ಇವುಗಳ ಪುನರ್ ನಿರ್ಮಾಣ ಕಾರ್ಯ ನಡೆಸಿ, ಕಾಲೇಜಿನ ತಡೆಗೋಡೆ ಮೇಲೆ ರಕ್ಷಣಾ ತಡೆಗೋಡೆ ನಿರ್ಮಾಣ ಕೈಗೊಳ್ಳಬೇಕು ಈ ಪ್ರದೇಶದಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ ಪೂರ್ಣಗೊಂಡಿದ್ದು ಆದಷ್ಟು ಬೇಗ ವಿದ್ಯುತ್ ಸಂಪರ್ಕ ನೀಡಬೇಕು ಎಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕರುಗಳಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಸಹಾಯಕ ಕಮಿಷನರ್ ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಡಿ.ಎಫ್.ಓ ಗಣಪತಿ, ಭೂದಾಖಲೆಗಳ ಉಪನಿರ್ದೇಶಕ ರವೀಂದ್ರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಗುತ್ತಿಗೆದಾರರು, ಎನ್.ಹೆಚ್ ಅಭಿಯಂತರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles