ಉಡುಪಿ: ಜನ ಸಾಮಾನ್ಯರು ಹೆದ್ದಾರಿ ಟೋಲ್ ಪಾವತಿಸುವುದರೊಂದಿಗೆ ಸಂಚಾರ ಕೈಗೊಳ್ಳುತ್ತಾರೆ. ಟೋಲ್ ಶುಲ್ಕ ಪಡೆದ ಗುತ್ತಿಗೆದಾರರು ಹೆದ್ದಾರಿ ನಿರ್ವಹಣೆಯನ್ನು ಉತ್ತಮವಾಗಿ ಮಾಡುವುದರೊಂದಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹೆದ್ದಾರಿಯಲ್ಲಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೆದ್ದಾರಿ ಪ್ರಾಧಿಕಾರದ ಅಭಿಯಂತರರುಗಳಿಗೆ ಸೂಚನೆ ನೀಡಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಎರಡು ವರ್ಷದಿಂದ 250 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಉಂಟಾಗಿ ಸಾವು-ನೋವುಗಳು ಉಂಟಾಗಿವೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಳೆದ ಎರಡು ತಿಂಗಳಿಂದ ರಸ್ತೆ ಅಪಘಾತದಲ್ಲಿ 8 ಕ್ಕೂ ಹೆಚ್ಚು ಜನ ಅಪಘಾತದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಗುತ್ತಿಗೆದಾರರು ಟೋಲ್ ಸಂಗ್ರಹವನ್ನು ಮಾಡುವುದೊಂದೆ ಗುರಿಯಾದರೆ ಸಾಲದು. ಹೆಚ್ಚು ಅಪಘಾತವಾಗುತ್ತಿರುವ ಕಪ್ಪು ಚುಕ್ಕೆ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳುವುದು, ರಸ್ತೆ ದಾರಿದೀಪಗಳನ್ನು ಅಳವಡಿಸುವುದು, ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತಿತರ ಕಾರ್ಯಗಳನ್ನು ಒಂದು ತಿಂಗಳ ಒಳಗಾಗಿ ಕೈಗೊಳ್ಳುವುದರೊಂದಿಗೆ ಅಪಘಾತ ಮುಕ್ತ ವಲಯವನ್ನಾಗಿಸಲು ಮುಂದಾಗಬೇಕೆಂದು ರಾಷ್ಟ್ರೀಯ ಹೆದ್ದಾರಿಯ ಅಭಿಯಂತರರಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವ ಹಾಗೆ ಕಾಮಗಾರಿಗೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಬೇಕು. ಪಡುಬಿದ್ರೆಯಲ್ಲಿ ದಾರಿದೀಪಗಳು ಸರಿಯಾದ ನಿರ್ವಹಣೆ ಇಲ್ಲದೇ ಅಪಘಾತಗಳು ಆಗುತ್ತಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಗುತ್ತಿಗೆದಾರರು ಈ ಕಾರ್ಯಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು,ಇವುಗಳ ನಿರ್ವಹಣೆ ಸರಿಯಿಲ್ಲದೇ ಅಪಘಾತಗಳು ಆದಲ್ಲಿ ಸಂಬಂಧಪಟ್ಟ ಅಭಿಯಂತರರುಗಳು ಹಾಗೂ ಗುತ್ತಿಗೆದಾರರ ಮೇಲೂ ಸಹ ನಿರ್ಲಕ್ಷ್ಯ ವಹಿಸಿರುವುದರ ಬಗ್ಗೆ ಪ್ರಕರಣದಲ್ಲಿ ಅಪರಾಧಿಯನ್ನಾಗಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕ ಯಶ್‌ಪಾಲ್ ಎ ಸುವರ್ಣ, ಶಾಸಕ ಗುರ್ಮೆ ಸುರೇಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಸಹಾಯಕ ಕಮೀಷನರ್ ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಗುತ್ತಿಗೆದಾರರುಗಳು, ಅಭಿಯಂತರರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆಜಮಾಡಿಯಿಂದ ಕುಂದಾಪುರ ವರೆಗೂ 66 ಕಿ.ಮೀ ವರೆಗೂ ಸವೀಸ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯಕತೆ ಇದ್ದು, ಪ್ರಸ್ತುತ ಕೋಟೇಶ್ವರದಿಂದ ಹೆಜಮಾಡಿವರೆಗೆ 26 ಕಿ.ಮೀ ಸವೀಸ್ ರಸ್ತೆ ಹಾಗೂ 3 ಫೂಟ್ ಓವರ್ ಬ್ರಿಡ್ಜ್ ಕಾಮಗಾರಿಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಶೇ.70 ಕ್ಕೂ ಹೆಚ್ಚು ಕಾಮಗಾರಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಸಂಗ್ರಹಿಸಿ, ಶೇಖರಣೆಗೊಳಿಸುವುದರೊಂದಿಗೆ ಸವೀಸ್ ರಸ್ತೆ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ರಾಷ್ಟ್ರೀಯ ಹೆದ್ದಾರಿಯ ಪಡುಬಿದ್ರೆ, ಬ್ರಹ್ಮಾವರ ಹಾಗೂ ಕೋಟದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲು ಡಿ.ಪಿ.ಆರ್ ಅನ್ನು ಕೂಡಲೇ ತಯಾರಿಸಿ, ನೀಡಿದ್ದಲ್ಲಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮತಿಯನ್ನು ದೊರಕಿಸಿ ಕೊಡಲಾಗುವುದು.
ಕೋಟ ಶ್ರೀನಿವಾಸ ಪೂಜಾರಿ (ಸಂಸದರು, ಉಡುಪಿ-ಚಿಕ್ಕಮಗಳೂರು)