ಉಡುಪಿ : ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಉಡುಪಿ ಇಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಶೋಕ್ ಹೆಚ್. ಅವರು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿರುವ ಲಿಂಗ ತಾರತಮ್ಯ, ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯತೆ ಹಾಗೂ ಹೆಣ್ಣು ಮಕ್ಕಳನ್ನು ಉಳಿಸಿ, ಬೆಳೆಸಿ, ಪೋಷಿಸುವ ಮಹತ್ವದ ಕುರಿತು ಅರಿವು ಮೂಡಿಸಿದರು.

ಪ್ರಸೂತಿ ತಜ್ಞೆ ಡಾ. ಕವಿತಾ ಮತ್ತು ಮಕ್ಕಳ ತಜ್ಞ ಡಾ. ಅಮರನಾಥ್ ಶಾಸ್ತ್ರಿ ಅವರು ಮಾತನಾಡಿ, ಕುಟುಂಬ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರಿಗೆ ಸಮಾನ ಅವಕಾಶ, ಶಿಕ್ಷಣ ಮತ್ತು ಸುರಕ್ಷತೆ ನೀಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂದೀಪ್, ಪ್ರಸೂತಿ ತಜ್ಞೆ ಡಾ. ಐಶ್ವರ್ಯ, ಶುಶ್ರೂಷಕಧೀಕ್ಷಕಿ ಪ್ಲೋರಾ ಡಿ’ಆಲ್ಮೇಡ, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಬಾಣಂತಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಜನಿಸಿದ ಮೂರು ನವಜಾತ ಹೆಣ್ಣು ಶಿಶುಗಳಿಗೆ ಕಿಟ್‌ಗಳನ್ನು ವಿತರಿಸಲಾಯಿತು. ಆಪ್ತಸಮಾಲೋಚಕಿ ವಿದ್ಯಾ ಸುವರ್ಣ ಕಾರ್ಯಕ್ರಮ ನಿರೂಪಿಸಿ, ಶುಶ್ರೂಷಕಾಧಿಕಾರಿ ರೇಣುಕ ವಂದಿಸಿದರು.



