ಉಡುಪಿ: ಉಡುಪಿ ನಗರದ ಬನ್ನಂಜೆ ರಾಷ್ಟ್ರೀಯ ಹೆದ್ದಾರಿ 169ಎ ಡಿವೈಡರ್ ಅಗೆದಿರುವ ವಿಚಾರವಾಗಿ ಇಂದು ನಡೆದ ಉಡುಪಿ ನಗರಸಭೆಯ ಸಾಮಾನ್ಯ ಸಭೆ ರಣಾಂಗಣವಾಗಿ ಮಾರ್ಪಟ್ಟಿತು. ಡಿವೈಡರ್ ಅಗೆದ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ ಎಂದು ನಗರಸಭೆಯ ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡಿದ್ದ ಪ್ರತಿಪಕ್ಷದವರು ಕ್ಷಮೆ ಯಾಚಿಸುವಂತೆ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದು ದೊಡ್ಡ ಗದ್ದಲ ಸೃಷ್ಟಿಯಾಯಿತು. ಬಳಿಕ ಕ್ಷಮೆಯಾಚನೆಗೆ ಒಪ್ಪದ ಪ್ರತಿಪಕ್ಷದ ಸದಸ್ಯರು ಸಭಾ ತ್ಯಾಗ ಮಾಡಿದ ಘಟನೆಯೂ ನಡೆಯಿತು.
ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಾಮನ್ಯ ಸಭೆಯಲ್ಲಿ, ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಅಂಗಡಿ ಎದುರಿನ ಡಿವೈಡರ್‌ನ್ನು ಒಡೆದು, ಬಟ್ಟೆ ಮಳಿಗೆಗೆ ಅನುಕೂಲ ಮಾಡಿಕೊಡಲಾಗಿದೆ. ಇದರಲ್ಲಿ ನಗರಸಭೆ ಭ್ರಷ್ಟಾಚಾರ ಎಸಗಿದೆ ಎಂದು ಸದಸ್ಯ ಟಿ.ಜಿ.ಹೆಗ್ಡೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಮಾಹಿತಿ ಮತ್ತು ನಗರಸಭೆ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಇದೇ ವಿಚಾರಕ್ಕೆ ಧ್ವನಿಗೂಡಿಸಿದ ಬನ್ನಂಜೆ ವಾರ್ಡಿನ ಸದಸ್ಯ ಸವಿತಾ ಹರೀಶ್‌ರಾಂ, ಹೆದ್ದಾರಿಗೆ ಸಂಬಂಧಿಸಿದ ಕಾಮಗಾರಿಯನ್ನಿಟ್ಟು ನಗರಸಭೆಯ ಮೇಲೆ ಗುಬೆ ಕೂರಿಸಿ, ಭೃಷ್ಟಾಚಾರ ಮಾಡಲಾಗಿದೆ ಎಂದು ನಗರಸಭೆ ಮೇಲೆ ದೂರು ಹೇಳುವದನ್ನು ಖಂಡಿಸುತ್ತೇನೆ. ಸುರೇಶ್ ಶೆಟ್ಟಿ ಬನ್ನಂಜೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು, ನಾನು ಕ್ಷಮೆ ಕೇಳಲಾರೆ, ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಸುರೇಶ್ ಶೆಟ್ಟಿ ಪ್ರಶ್ನಿಸಿದರು. ಈ ವಾಗ್ವಾದ ಮುಂದುವರಿದು ಸಭೆಯಲ್ಲಿ ಕೋಲಾಹಲವೇರ್ಪಟ್ಟಿತು. ಈ ಕುರಿತು ನಗರಸಭೆಯ ಪೌರಾಯುಕ್ತರು ಸ್ಪಷ್ಟಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಬನ್ನಂಜೆಯಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ ಎನ್ನುವ ದೂರು ಬರುತ್ತಿರುವ ಹಿನ್ನಲೆಯಲ್ಲಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕರ ಶಿಫಾರಸ್ಸಿನಂತೆ ಎಸ್ಪಿಯವರ ನಿರ್ದೇಶನದಲ್ಲಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಇಂಜಿನಿಯರ್ ಡಿವೈಡರ್ ತೆರವು ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ನಗರಸಭೆಯ ಅನುಮತಿ ಪಡೆದಿಲ್ಲ. ಇದರಲ್ಲಿ ನಗರಸಭೆಯ ಪಾತ್ರವಿಲ್ಲ ಎಂದರು. ಈ ವಿಚಾರ ವಾಗಿ ಸದಸ್ಯರು ಎಸ್ಪಿಯ ಈ ಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್, ಪ್ರಜಾಪ್ರಭುತ್ವ ವ್ಯವಸ್ಥೆ ಆರೋಪ, ಟೀಕೆ ಮಾಡುವುದು ಸಹಜ. ಅದಕ್ಕಾಗಿ ಕ್ಷಮೆಯಾಚನೆಗೆ ಪಟ್ಟು ಹಿಡಿಯುವುದು ಸರಿಯಲ್ಲ ಎಂದರು. ಆದರೆ ಇದಕ್ಕೆ ಒಪ್ಪದ ಆಡಳಿತ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಬಳಿಕ ವಾದ ವಿವಾದದ ಬಳಿಕ ರಮೇಶ್ ಕಾಂಚನ್, ನಗರಸಭೆ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಸುರೇಶ್ ಶೆಟ್ಟಿ ಹೇಳಿಕೆಗೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.

ಆದರೆ ಆಡಳಿತ ಪಕ್ಷ ಸದಸ್ಯರು, ಸುರೇಶ್ ಶೆಟ್ಟಿ ಕ್ಷಮೆಯಾಚಿಸಲೇ ಬೇಕು ಎಂದು ಪಟ್ಟು ಹಿಡಿದು. ಆಗ ಘಟನೆಯ ಕುರಿತು ಸುರೇಶ್ ಶೆಟ್ಟಿ ಸ್ಪಷ್ಟನೆ ನೀಡುತ್ತಾ, ಟಿ.ಜಿ.ಹೆಗ್ಡೆ ಓದಿರುವ ಹೇಳಿಕೆ ಯನ್ನು ನಾನು ನೀಡಿಲ್ಲ. ನಾನು ನೀಡಿರುವ ಹೇಳಿಕೆಯೇ ಬೇರೆ ಎಂದರು. ಗದ್ದಲ ಮುಂದುವರಿದಾಗ ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಿಮ್ಮ ಹೇಳಿಕೆಯಿಂದ ನಮಗೆ ನೋವು ಉಂಟಾಗಿದೆ ಎಂದರು. ವಾಗ್ವಾದ ಮುಂದುವರಿದು ಕ್ಷಮೆಯಾಚನೆಗೆ ಪಟ್ಟು ಹಿಡಿದ ಹಿನ್ನಲೆಯಲ್ಲಿ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಬಳಿಕ ಹಿರಿಯ ಸದಸ್ಯೆ ಸುಮಿತ್ರಾ ನಾಯಕ್ ಹೊರಗಡೆ ವಿರೋಧ ಪಕ್ಷದ ಸದಸ್ಯರನ್ನು ಮನವೊಲಿಸಿ ಸಭೆಗೆ ಕರೆತಂದರು. ಬಳಿಕ ಈ ಚರ್ಚೆ ಮುಕ್ತಾಯಗೊಂಡು ಇನ್ನಿತರ ವಿಚಾರಗಳ ಕುರಿತು ಚರ್ಚೆ ಮುಂದುವರಿಯಿತು. ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ ಉಪಸ್ಥಿತರಿದ್ದರು.


