ಉಡುಪಿ: ಬೆಂಗಳೂರು ಓಂ ಶಕ್ತಿ ಮಾಲಧಾರಿಗಳ ಮೇಲೆ ನಡೆದ ಹಲ್ಲೆ, ಕೋಗಿಲು ಪ್ರಕರಣದಲ್ಲಿ ಬಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ ಹಾಗೂ ದ್ವೇಷ ಭಾಷಣ ಮಸೂದೆ ಸೇರಿದಂತೆ ಹಲವು ವಿಚಾರಗಳಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾರ್ಕಳದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಲಧಾರಿಗಳ ಮೇಲಿನ ಹಲ್ಲೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. ಹಿಂದೂ ಧಾರ್ಮಿಕ ನಂಬಿಕೆಗಳ ಮೇಲೆ ಮುಕ್ತವಾಗಿ ಅವಹೇಳನ ಮಾಡಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಮಾಲಧಾರಿಗಳ ಮೇಲೆ ಹಲ್ಲೆ ನಡೆದಿದೆ ಎಂದರು. ಸರ್ಕಾರ ತುಷ್ಟೀಕರಣ ನೀತಿಯನ್ನು ಕೈಬಿಟ್ಟು, ಹಿಂದೂ ಭಾವನೆಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೇವಲ ಗೃಹ ಇಲಾಖೆ ಮಾತ್ರವಲ್ಲ, ಸಂಪೂರ್ಣ ಸರ್ಕಾರವೇ ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದರು.

ಕೋಗಿಲು ಪ್ರಕರಣದ ಕುರಿತು ಮಾತನಾಡಿದ ಸುನಿಲ್ ಕುಮಾರ್, ಅಲ್ಲಿ ಯಾವುದೇ ವಿವಾದವಿಲ್ಲ, ಅತಿಕ್ರಮಣ ತೆರವುಗೊಳಿಸುವುದು ಸರ್ಕಾರದ ಕರ್ತವ್ಯ ಎಂದರು. ಇನ್ಯಾರೋ ಬಂದು ಸರ್ಕಾರಿ ಜಾಗದಲ್ಲಿ ಮನೆ, ಶೆಡ್ ಕಟ್ಟಿಕೊಂಡರೆ ತೆರವು ಮಾಡಬಾರದೇ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರೋ ಅಥವಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳೋ ಎಂಬ ಗೊಂದಲ ಇದೆ ಎಂದು ವ್ಯಂಗ್ಯವಾಡಿದರು. ಪ್ರತಿಭಟನೆಗೆ ಅನುಮತಿ ನೀಡದಿರುವುದು ಸರ್ವಾಧಿಕಾರ ಧೋರಣೆಯಾಗಿದೆ ಎಂದು ಆರೋಪಿಸಿದರು.

ದ್ವೇಷ ಭಾಷಣ ಮಸೂದೆ ಕುರಿತು ಮಾತನಾಡಿದ ಅವರು, ದಲಿತರು, ರೈತರು ಹಾಗೂ ಸಾರ್ವಜನಿಕರ ಧ್ವನಿ ಹತ್ತಿಕ್ಕಲು ಈ ಮಸೂದೆ ತರಲಾಗಿದೆ ಎಂದು ಹೇಳಿದರು. ಕಾಂಗ್ರೆಸ್ ವಿರುದ್ಧ ಮಾತನಾಡುವವರನ್ನು ತಡೆಯಲು ಈ ಕಾಯ್ದೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು. ವಾಟ್ಸಪ್‌ನಲ್ಲಿ ಸಂದೇಶ ಹಾಕಿದರೆ ಪ್ರಕರಣ ದಾಖಲಿಸುವ ಸರ್ಕಾರ, ‘ಸರ್ವನಾಶ ಮಾಡುತ್ತೇನೆ’ ಎಂದು ಹೇಳಿರುವ ಭರತ್ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದರು. ದ್ವೇಷ ಭಾಷಣ ಮಸೂದೆ ಕಾಂಗ್ರೆಸ್ ನಾಯಕರಿಗೆ ಅನ್ವಯವಾಗುವುದಿಲ್ಲವೇ ಎಂದು ಸರ್ಕಾರ ಉತ್ತರ ನೀಡಬೇಕು ಎಂದರು.

ಸಿದ್ದರಾಮಯ್ಯ ಅವರ ಸುದೀರ್ಘ ಮುಖ್ಯಮಂತ್ರಿ ಅವಧಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ಎಷ್ಟು ದಿನ ಅಧಿಕಾರದಲ್ಲಿದ್ದೆವು ಎಂಬುದು ದಾಖಲೆ ಅಲ್ಲ, ಹೇಗೆ ಆಡಳಿತ ನಡೆಸಿದೆವು ಎಂಬುದೇ ಮುಖ್ಯ ದಾಖಲೆ ಎಂದು ಹೇಳಿದರು. ಜನರು ನೆನಪಿಡುವಂತಹ ಕೆಲಸ ಮಾಡಿದವರೇ ನಿಜವಾದ ದಾಖಲೆ ನಿರ್ಮಿಸುತ್ತಾರೆ ಎಂದ ಅವರು, ಹಿಂದೂ ಕಾರ್ಯಕರ್ತರು, ರೈತರ ಹತ್ಯೆಗಳು ಹಾಗೂ ಭ್ರಷ್ಟಾಚಾರ ಆರೋಪಗಳ ಕುರಿತು ಮುಖ್ಯಮಂತ್ರಿ ಮೊದಲು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.


