Thursday, March 5, 2026

spot_img

ರಾಜ್ಯ ಮಹಿಳಾ ನಿಲಯದಲ್ಲಿ ನಿವಾಸಿನಿಯರ ಅದ್ಧೂರಿ ವಿವಾಹ ಸಂಭ್ರಮ…

ಉಡುಪಿ: ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಇಂದು ಎರಡು ನಿವಾಸಿನಿಯರ ಅದ್ಧೂರಿ ವಿವಾಹ ಸಮಾರಂಭ ನಡೆಯಿತು. ಸ್ವಾಗತ ದ್ವಾರ, ಮಾವಿನ ತೋರಣ, ಮದುವೆ ಚಪ್ಪರ, ಬಣ್ಣಬಣ್ಣದ ರಂಗೋಲಿಗಳ ಅಲಂಕಾರ—ಇವೆಲ್ಲವೂ ಖಾಸಗಿ ಮದುವೆಗೆ ಕಡಿಮೆಯಿಲ್ಲದ ರೀತಿಯಲ್ಲಿ ಸಿಂಗರಿಸಲಾಗಿದ್ದವು. ಅತಿಥಿಗಳನ್ನು ಸಿಬ್ಬಂದಿ ಗುಲಾಬಿ ಹೂವು ಮತ್ತು ತಂಪುಪಾನೀಯ ನೀಡಿ ಬರಮಾಡಿಕೊಂಡರು. ನಿಲಯದ ನಿವಾಸಿನಿಯರ ಮದುವೆಯೇ ಈ ಎಲ್ಲಾ ಅದ್ಧೂರಿಯ ಕೇಂದ್ರಬಿಂದುವಾಗಿತ್ತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯದ ಸಹಯೋಗದಲ್ಲಿ ನಡೆದ ಈ ಸಮಾರಂಭದಲ್ಲಿ, ಚಿ.ಸೌ. ಮಲ್ಲೇಶ್ವರಿ ಅವರ ವಿವಾಹವು ದ.ಕ. ಜಿಲ್ಲೆಯ ಮೂಲ್ಕಿಬಪ್ಪನಾಡಿನ ಚಿ.ಸಂಜಯ ಪ್ರಭು ಅವರೊಂದಿಗೆ, ಚಿ.ಸೌ. ಸುಶೀಲ ಅವರ ವಿವಾಹವು ಹಾಸನ ಜಿಲ್ಲೆಯ ಕೃಷ್ಣಾಪುರದ ಚಿ. ನಾಗರಾಜ ಅವರೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿತು. ಶುಭಲಗ್ನದಲ್ಲಿ ಜಿಲ್ಲಾಾಧಿಕಾರಿ ಸ್ವರೂಪ ಟಿ.ಕೆ. ಅವರು ಧಾರೆ ಎರೆಯುವ ಮೂಲಕ ದಂಪತಿಗಳಿಗೆ ಆಶೀರ್ವಾದ ನೀಡಿದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಮಾತನಾಡಿ, ಮಹಿಳಾ ನಿಲಯದಲ್ಲಿ ವಸಿಸುವ ಹೆಣ್ಣುಮಕ್ಕಳಿಗೆ ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ಜೊತೆಗೆ, ಅವರ ಇಚ್ಛೆಯಂತೆ ವರಯಾರ ಪಟ್ಟಿಯನ್ನು ಪರಿಶೀಲಿಸಿ ವಿವಾಹ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು. ವಧುಗಳಿಗೆ 50,000 ರೂ. ವಿವಾಹ ಪ್ರೋತ್ಸಾಹಧನವನ್ನು ಅವರ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು. ಮುಂದಿನ ಮೂರು ವರ್ಷಗಳ ಕಾಲ ಇಲಾಖೆಯು ದಂಪತಿಗಳ ಜೀವನೋಪಾಯದ ಮೇಲೂ ನಿಗಾ ವಹಿಸಲಿದ್ದು ನಂತರ ಹಣವನ್ನು ವಧುಗಳ ಖಾತೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

ನಿವಾಸಿನಿ ಮಲ್ಲೇಶ್ವರಿ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದು, ಸಂಜಯ ಪ್ರಭು ಅವರು ಎಂ.ಕಾಂ ಪೂರ್ಣಗೊಳಿಸಿ ಐಬಿಎಂ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೊಬ್ಬ ವಧುವಾದ ಸುಶೀಲ ಅವರು ಮೂಗಿ ಮತ್ತು ಕಿವುಡಿಯಾದರೂ ತಮ್ಮ ಎಲ್ಲಾ ನ್ಯೂನ್ಯತೆಗಳನ್ನು ಮೆಟ್ಟಿ ನಿಂತು ನಿಲಯದ ಕಾರ್ಯಗಳನ್ನು ಹೊಣೆ ಹೊತ್ತು ನಿರ್ವಹಿಸುತ್ತಿರುವ ಪ್ರಶಂಸನೀಯ ಗುಣವುಳ್ಳವರು. ವರನಾದ ನಾಗರಾಜ ಅವರು ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ.

ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಮಾತನಾಡಿ, ಈಗಾಗಲೇ 25 ಮದುವೆಗಳನ್ನು ಯಶಸ್ವಿಯಾಗಿ ನೆರವೇರಿಸಿರುವ ನಿಲಯ ಇಂದು 26 ಹಾಗೂ 27ನೇ ವಿವಾಹ ಸಮಾರಂಭಗಳನ್ನು ನೆರವೇರಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ವಧುಗಳನ್ನು ಅರಸಿ ಕರೆಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಿಲಯದ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ ಎಂದರು.

ಸಮಾರಂಭದಲ್ಲಿ ಸಿಹಿ ತಿನಿಸುಗಳೊಂದಿಗೆ ಭರ್ಜರಿ ಭೋಜನವನ್ನು ಏರ್ಪಡಿಸಲಾಗಿತ್ತು. ಆಹಾರಸೇವೆ ಬಳಿಕ ಅತಿಥಿಗಳು ನವ ದಂಪತಿಗಳೊಂದಿಗೆ ಫೋಟೋ ಸೆಷನ್ ನಡೆಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಅಧಿಕಾರಿ ವೀಣಾ ವಿವೇಕಾನಂದ ಸೇರಿದಂತೆ ನಿಲಯದ ಸಿಬ್ಬಂದಿ, ನಿವಾಸಿನಿಯರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles