ಉಡುಪಿ: ರಾಜ್ಯ ಕರುಡು ನಿಯಮಗಳು–2026ಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಲು ಸಿಐಟಿಯು ರಾಜ್ಯಾದ್ಯಂತ ಕರೆ ನೀಡಿದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ವಿವಿಧ ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸಿದವು.

ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘ, ಬೀಡಿ ಎಂಡ್ ಟೋಬ್ಯಾಕೋ ಲೇಬರ್ ಯೂನಿಯನ್ ಹಾಗೂ ಜನರಲ್ ವರ್ಕರ್ಸ್ ಯೂನಿಯನ್ ಸಂಘಗಳ ಸದಸ್ಯರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಬಳಿಕ ಕಾರ್ಮಿಕ ಅಧಿಕಾರಿಗಳು ಮತ್ತು ಅಪಾರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಕಾರ್ಯದರ್ಶಿಗೆ ಆಕ್ಷೇಪಣೆ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಸಮವರ್ತಿ ಪಟ್ಟಿಯ ಕಾರ್ಮಿಕ ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಸೀಮಿತಗೊಳಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ವಿರೋಧಿಸಬೇಕು, ಮೂಲ ಸಂಹಿತೆಗಳಿಗೆ ತಿದ್ದುಪಡಿ ಮಾಡಿ ನಂತರ ನಿಯಮಾವಳಿ ರೂಪಿಸಬೇಕು ಎಂದು ಆಗ್ರಹಿಸಿದರು. ಕರಡು ನಿಯಮಗಳನ್ನು ಕನ್ನಡದಲ್ಲಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಸಮರ್ಪಕ ಸಮಯ ನೀಡಬೇಕು ಹಾಗೂ ಕನಿಷ್ಠ ವೇತನ ಅಧಿಸೂಚನೆಯನ್ನು ತಕ್ಷಣ ಹೊರಡಿಸಬೇಕು ಎಂಬ ಬೇಡಿಕೆಯನ್ನು ಮುಂದಿರಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಸೇರಿದಂತೆ ವಿವಿಧ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.



