ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿ ಇದರ ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗವು ಬಿಎಎಮ್‌ಎಸ್ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಮಾರ್ಗದರ್ಶಿ ಆಯುರ್ವೇದ ಸಮ್ಮೇಳನ ‘ಆಯುರ್ ದಿಗ್ದರ್ಶಿ – 2025’ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು, ಬಿಎಎಮ್‌ಎಸ್ ನಂತರ ವಿದ್ಯಾರ್ಥಿಗಳಿಗಿರುವ ಅವಕಾಶಗಳನ್ನು ತಿಳಿಸಿದರು. ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್.ಅವರು ಆಯುರ್ವೇದ ವೈದ್ಯರಲ್ಲಿರಬೇಕಾದ ಗುಣಲಕ್ಷಣಗಳ ಕುರಿತು ಮಾತನಾಡಿದರು. ಪ್ರಧಾನ ಸಂಪನ್ಮೂಲ ವ್ಯಕ್ತಿ ವಿಜಯಪುರದ ಪವಮಾನ ಆಯುರ್ವೇದ ಫಾರ್ಮಸಿಯ ಸ್ಥಾಪಕ ಡಾ.ಶ್ರೀನಿವಾಸ ಒಡೆಯರ್ ಅವರು ವೈದ್ಯಕೀಯ ವೃತ್ತಿಯಲ್ಲಿ ಆಯುರ್ವೇದ ಶಾಸ್ತçದ ಆಳವಾದ ಅಧ್ಯಯನದ ಅಗತ್ಯವನ್ನು ನೈಜ ರೋಗಿಗಳ ಉದಾಹರಣೆಗಳ ಮೂಲಕ ತಿಳಿಸಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಉಡುಪಿ ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಇದರ ರೋಗನಿದಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಅವರು ಬಿಎಎಮ್‌ಎಸ್ ನಂತರದ ವಿಫುಲವಾದ ಅವಕಾಶಗಳನ್ನು ತಿಳಿಸಿದರು. ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷೆ ಡಾ. ವಿದ್ಯಾಲಕ್ಷ್ಮೀ ಕೆ. ವಿಭಾಗದ ಕಾರ್ಯ ಚಟುವಟಿಕೆಗಳನ್ನು ಹಾಗೂ ಶಾಸ್ತ್ರಧ್ಯಯನದ ಅಗತ್ಯವನ್ನು ಪ್ರಾಸ್ತಾವಿಸಿದರು. ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಅರ್ಹಂತ್ ಕುಮಾರ್ ಎ ವಂದಿಸಿದರು.

ರಾಜ್ಯದ ವಿವಿಧ ಆಯುರ್ವೇದ ಕಾಲೇಜುಗಳಿಂದ ಆಗಮಿಸಿದ 150 ರಷ್ಟು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಮಹತ್ವದ ಅವಕಾಶಗಳನ್ನು ಕುರಿತು ಜ್ಞಾನವನ್ನು ಪಡೆದುಕೊಂಡರು. ಸಂಹಿತಾ ಸಿದ್ಧಾಂತ ವಿಭಾಗದ ಪ್ರಾಧ್ಯಾಪಕರಾದ ಸುಬ್ರಹ್ಮಣ್ಯ ಭಟ್, ಸಹಪ್ರಾಧ್ಯಾಪಕರಾದ ಡಾ. ಲಿಖಿತಾ ಡಿ.ಎನ್., ಸಹಾಯಕ ಪ್ರಾಧ್ಯಾಪಕರಾದ ಡಾ. ಮಹಾಲಕ್ಷ್ಮೀ ಎಮ್.ಎಸ್., ಡಾ. ಧನಶ್ರೀ ಪಾಟೀಲ್ ಹಾಗೂ ಇತರ ಉಪನ್ಯಾಸಕ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.