ಉಡುಪಿ : ಕರಾವಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕಂಬಳ ಕ್ರೀಡೆಯನ್ನು ಇದೀಗ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಆಯೋಜಿಸಲು ಹೈಕೋರ್ಟ್ ಹಸಿರು ನಿಶಾನೆ ನೀಡಿದೆ. ಈ ತೀರ್ಪಿನಿಂದ ಕಂಬಳ ಪ್ರೇಮಿಗಳು ಹಾಗೂ ರೈತಾಪಿ ಸಮುದಾಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಕಂಬಳ ಆಯೋಜಿಸಿದಾಗ, ಕಂಬಳವನ್ನು ಕರಾವಳಿ ಹೊರತುಪಡಿಸಿ ಬೇರೆಡೆ ಆಯೋಜಿಸದಂತೆ ಮನವಿ ಸಲ್ಲಿಸಿದ್ದ ಪೇಟಾ ಸಂಸ್ಥೆಯ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ರಾಜ್ಯದಾದ್ಯಂತ ಕಂಬಳ ಆಯೋಜನೆಗೆ ಕಾನೂನುಬದ್ಧ ಮಾನ್ಯತೆ ದೊರೆತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿ ಪ್ರಸಾದ ಶೆಟ್ಟಿ ಅವರು, ಹೈಕೋರ್ಟ್ ಆದೇಶ ರಾಜ್ಯ ಸರ್ಕಾರದ ದೃಢ ನಿಲುವಿಗೆ ಪೂರಕವಾಗಿದೆ. ಇದು ಕಂಬಳ ಅಸೋಸಿಯೇಷನ್‌ಗೆ ಹಾಗೂ ರೈತ ಸಮುದಾಯಕ್ಕೆ ಹರ್ಷದ ವಿಷಯ. ಒಂದು ವರ್ಷ ಹಿಂದೆಯೇ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಂಬಳ ಆಯೋಜಿಸಿದ್ದೆವು; ಅದರಿಂದ ಅಂತರಾಷ್ಟ್ರೀಯ ಮಟ್ಟದ ಮೆಚ್ಚುಗೆ ಸಿಕ್ಕಿತು. ಮೈಸೂರು ದಸರಾ ಮತ್ತು ಶಿವಮೊಗ್ಗದಲ್ಲೂ ಕಂಬಳ ಆಯೋಜನೆಗೆ ಬೇಡಿಕೆಗಳಿದ್ದವು. ಆದರೆ ಪೇಟಾದವರು ಅದನ್ನು ವಿರೋಧಿಸಿದ್ದರು. ಈಗ ಹೈಕೋರ್ಟ್ ಆದೇಶದಂತೆ ರಾಜ್ಯದ ಯಾವುದೇ ಭಾಗದಲ್ಲೂ ಕಂಬಳ ಆಯೋಜಿಸಬಹುದು. ಆದರೆ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ ಎಂದರು.

ಕರಾವಳಿಯಲ್ಲಿ ಪ್ರತಿ ವರ್ಷ ಸುಮಾರು 25 ಸ್ಥಳಗಳಲ್ಲಿ ಜೋಡುಕರೆ ಕಂಬಳ ನಡೆಯುತ್ತದೆ. ಸುಮಾರು 360ಕ್ಕೂ ಹೆಚ್ಚು ಜೋಡು ಕೋಣಗಳು ಭಾಗವಹಿಸುತ್ತವೆ. ಕುಂದಾಪುರದಲ್ಲಿ ಮಾತ್ರವೇ 300ಕ್ಕೂ ಹೆಚ್ಚು ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಈಗ ಬೆಂಗಳೂರು, ಹಾಸನ, ಮೈಸೂರು, ಶಿವಮೊಗ್ಗ ಮತ್ತು ಮುಂಬೈಯಲ್ಲೂ ಕಂಬಳ ಆಯೋಜನೆಗೆ ಜನರಿಂದ ಬೇಡಿಕೆ ಬಂದಿದೆ, ಕುದುರೆ ರೇಸ್ ನೋಡಲು ಪೇಟಾದವರು ತೆರಳುತ್ತಾರೆ, ಆದರೆ ರೈತಾಪಿಗಳ ಸಂಪ್ರದಾಯವಾದ ಕಂಬಳಕ್ಕೆ ಮಾತ್ರ ವಿರೋಧಿಸುತ್ತಾರೆ. ಕೋಣಗಳಿಗೆ ಯಾವ ರೀತಿಯ ಹಿಂಸೆಯೂ ಆಗುವುದಿಲ್ಲ ಅವುಗಳನ್ನು ಪ್ರೀತಿಯಿಂದ ಸಾಕಲಾಗುತ್ತದೆ. ಕಂಬಳ ಕ್ರೀಡೆ ರೈತಾಪಿಗಳ ಹಬ್ಬ, ಸಂಸ್ಕೃತಿ ಮತ್ತು ಆತ್ಮಗೌರವದ ಸಂಕೇತ ಎಂದು ಸ್ಪಷ್ಟಪಡಿಸಿದರು.