ಉಡುಪಿ : ರಾಜ್ಯದ ಛಾಯಾಗ್ರಾಹಕರ ಬಹು ವರ್ಷಗಳ ಬೇಡಿಕೆಯಂತೆ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಆರಂಭಿಸಿ ಛಾಯಾಗ್ರಾಹಕರ ವೃತ್ತಿಗೆ ಮಾನ್ಯತೆ ಒದಗಿಸಿ ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುವಂತೆ ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ಛಾಯಾಗ್ರಹಣವೆಂದರೆ ಇಂದು ಕೇವಲ ಕಲೆ ಅಥವಾ ವೃತ್ತಿಯಾಗಿಯೇ ಅಲ್ಲ, ಅದು ಸಂಸ್ಕೃತಿ ಸಂರಕ್ಷಣೆ, ಸಾಮಾಜಿಕ ಬದಲಾವಣೆ, ಶಿಕ್ಷಣ, ತಾಂತ್ರಿಕ ನೈಪುಣ್ಯವರ್ಧನೆ ಹಾಗೂ ಬದುಕು ಕಟ್ಟಿಕೊಳ್ಳುವ ಮಹತ್ವದ ಕ್ಷೇತ್ರವಾಗಿದೆ.

ಛಾಯಾಗ್ರಾಹಕರು ಪತ್ರಿಕೋದ್ಯಮ, ಹಬ್ಬ-ಉತ್ಸವ, ವೈವಾಹಿಕ, ನೈಸರ್ಗಿಕ ಮತ್ತು ಸಾಂಸ್ಕೃತಿಕ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲಿ ಭಾರೀ ಸಂಖ್ಯೆಯ ಪ್ರತಿಭಾವಂತರಿದ್ದರೂ, ನಮ್ಮ ರಾಜ್ಯದಲ್ಲಿ ಇನ್ನೂ ಸರಕಾರೀ ಮಾನ್ಯತೆ ಹೊಂದಿದ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಯಾಗಿಲ್ಲ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಸರಕಾರದ ಆಶ್ರಯದಲ್ಲಿ ಛಾಯಾಗ್ರಹಣ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಯು ಅತ್ಯಗತ್ಯವಾಗಿ ಬೇಕಾಗಿದೆ.
ಕರ್ನಾಟಕದಲ್ಲಿ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವ ಮೂಲಕ ರಾಜ್ಯದ ಛಾಯಾಗ್ರಾಹಕರ ವೃತ್ತಿಗೆ ಮಾನ್ಯತೆ, ಸಾಂಸ್ಕೃತಿಕ ಮತ್ತು ಇತಿಹಾಸಪೂರ್ವ ದಾಖಲೆಗಳ ಸಂರಕ್ಷಣೆ, ಛಾಯಾಗ್ರಾಹಕರಿಗೆ ತಾಂತ್ರಿಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಹಿರಿಯ ಛಾಯಾಗ್ರಾಹಕರಿಗೆ ಪಿಂಚಣಿ, ವಿಮೆ, ಪ್ರಶಸ್ತಿ, ಪ್ರವಾಸೋದ್ಯಮ ಚಟುವಟಿಕೆಗೆ ಪ್ರೋತ್ಸಾಹ ಹಾಗೂ ಯುವ ಛಾಯಾಗ್ರಾಹಕರನ್ನು ಪ್ರೋತ್ಸಾಹಿಸುವ ಮೂಲಕ ಯುವಸಬಲೀಕರಣಕ್ಕೆ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಮೂಲಕ ಶಕ್ತಿ ನೀಡಬಹುದಾಗಿದೆ. ಛಾಯಾಗ್ರಹಕರು ಸಮಾಜಕ್ಕೆ ನೀಡುತ್ತಿರುವ ಸೇವೆಗೆ ಸರಿಯಾದ ಗೌರವ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಛಾಯಾಗ್ರಹಣ ಅಕಾಡೆಮಿ ಸ್ಥಾಪನೆಯಾಗುವುದು ಅತ್ಯಂತ್ಯ ಅವಶ್ಯಕವಾಗಿದ್ದು ಕರ್ನಾಟಕದಲ್ಲಿ ರಾಜ್ಯಮಟ್ಟದ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸುವ ಬಗ್ಗೆ ಕ್ರಮ ವಹಿಸುವಂತೆ ರಾಜ್ಯದ ಸಮಸ್ತ ಛಾಯಾಗ್ರಾಹಕರ ಪರವಾಗಿ ಮನವಿ ಮಾಡುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.