ಕುಂದಾಪುರ: ಶ್ರೀ ವಿಶ್ವಾವಸು ನಾಮ ಸಂವತ್ಸರದ ಹಚ್ಚಹಸುರಿನ ಇಳೆಯಲ್ಲಿ ಸದ್ಯ ಚಂದ್ರಮಾನ ಯುಗಾದಿ ಆಚರಣೆ ಹಿನ್ನೆಲೆಯಲ್ಲಿ ಕೋಡಿ ಕಡಲ ತಡಿಯಲ್ಲಿ ಸಂಭ್ರಮದ ಮರಳು ಶಿಲ್ಪ ಮೂಡಿ ಬಂದಿದೆ. ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಧೈಯದೊಂದಿಗೆ ಶುಭಾಶಯವನ್ನು ಸಾರುವ ಮರಳು ಶಿಲ್ಪವನ್ನು “ಸ್ಯಾಂಡ್ ಥೀಂ” ಉಡುಪಿ ಕಲಾವಿದರು ರಚಿಸಿದ್ದಾರೆ.

ಮರಳು ಶಿಲ್ಪ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ಇವರ ಕೈಚಳಕದಲ್ಲಿ ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ ಮರಳು ಶಿಲ್ಪ ಮೂಡಿ ಬಂದಿದೆ. ಹಸಿರು ತಳಿರು ತೋರಣದೊಂದಿಗೆ ಮನೆಗೋಡೆ, ಮರದ ಕಳಸೆಯಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು-ಬೆಲ್ಲ, ಮಾವು, ತೆಂಗಿನಕಾಯಿ, ಸಿಯಾಳದ ಗೊಂಚಲಿನೊಂದಿಗೆ ಈ ಕೃತಿಯು ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊಂದಿಗೆ, ಆಕರ್ಷಣೀಯವಾಗಿ ಮೂಡಿ ಬಂದಿದ್ದು ಜನ ಮನಸೂರೆ ಗೊಂಡಿದೆ.