ಉಡುಪಿ : ಯಕ್ಷಗಾನಕ್ಕೆ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಈ ಕಲೆಗೆ ಹೊಸ ಆಯಾಮ ನೀಡಿದ್ದು, ಇಂದು ಯಕ್ಷಗಾನ ನಿಜಾರ್ಥದಲ್ಲಿ “ವಿಶ್ವಗಾನ”ವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕಾಟಿಪಳ್ಳ ಗಣೇಶಪುರದ ಶ್ರೀ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಸುರತ್ಕಲ್ ಯಕ್ಷ ಪೂರ್ಣಿಮಾ ಯಕ್ಷಗಾನ ತರಬೇತಿ ಕೇಂದ್ರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನವು ಗಂಡು ಕಲೆಯೆಂಬ ಅಭಿಪ್ರಾಯವನ್ನು ಮೀರಿ, ಮಹಿಳೆಯರು ಇಂದು ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವುದರಿಂದ ಈ ಕಲೆ ಮತ್ತಷ್ಟು ವಿಸ್ತಾರವಾಗಿದೆ. ಹೆಣ್ಣು ಯಕ್ಷಗಾನ ಕಲಿತರೆ ಅದು ಕಲೆಯ ಬೆಳವಣಿಗೆಗೆ ದಾರಿಯಾಗುತ್ತದೆ ಎಂಬುದಕ್ಕೆ ಯಕ್ಷ ಪೂರ್ಣಿಮಾ ಕೇಂದ್ರದ ಮೂಲಕ ಹೆಣ್ಮಕ್ಕಳಿಗೆ ತರಬೇತಿ ನೀಡುತ್ತಿರುವ ಪೂರ್ಣಿಮಾ ಯತೀಶ್ ರೈ ಉತ್ತಮ ಉದಾಹರಣೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲಾಪೋಷಕಿ ಶಕುಂತಲಾ ರಮಾನಂದ ಭಟ್ ಇಡ್ಯಾ ಮಾತನಾಡಿ, ಪೂರ್ಣಿಮಾ ಯತೀಶ್ ರೈ ಅವರು ಶ್ರದ್ಧೆಯಿಂದ ಯಕ್ಷಗಾನ ಕಲಿತು, ಇದೀಗ ಇತರರಿಗೆ ಅದನ್ನು ಹಂಚುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಯಕ್ಷಗುರು ಶಂಕರ ನಾರಾಯಣ ಮೈರ್ಪಾಡಿ, ಉದ್ಯಮಿ ಧರ್ಮೇಂದ್ರ ಗಣೇಶಪುರ, ಗೋವಿಂದ ದಾಸ್ ಕಾಲೇಜಿನ ಆಡಳಿತ ನಿರ್ದೇಶಕ ರಮೇಶ್ ಭಟ್ ಎಸ್.ಜಿ., ಪ್ರಾಂಶುಪಾಲ ಪ್ರೊ. ಹರೀಶ್ ಆಚಾರ್ಯ, ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದ ವ್ಯವಸ್ಥಾಪಕ ಮಾದವ ಶೆಟ್ಟಿ ಬಾಳ, ಡಾ. ಸಂದೇಶ್ ರಾವ್, ಯತೀಶ್ ರೈ ಚೆಲ್ಯಡ್ಕ, ಗಂಗಾಧರ ಪೂಜಾರಿ, ಸಹನಾ ರಾಜೇಶ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಭೆಗೆ ಮುನ್ನ ಕೇಂದ್ರದ ಮಕ್ಕಳಿಂದ “ಪಾಂಚಜನ್ಯ” ಯಕ್ಷಗಾನ ಪ್ರದರ್ಶನ ನಡೆದಿದ್ದು, ನಂತರ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘದಿಂದ “ಮೇದಿನಿ ನಿರ್ಮಾಣ” ಹಾಗೂ “ಮಹಿಷ ಮರ್ಧಿನಿ” ಯಕ್ಷಗಾನ ಪ್ರದರ್ಶನಗಳು ಜರುಗಿದವು. ಈ ಸಂದರ್ಭದಲ್ಲಿ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿನಿ ಶ್ರಾವ್ಯ ಕುಲಾಲ್ ಅವರನ್ನು ಅಭಿನಂದಿಸಲಾಯಿತು. ಕಲಾಪೋಷಕರಾದ ವೆಂಕಟೇಶ ಬೋಳಿಯಾಳ ಹಾಗೂ ಡಾ. ಅನಂತಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಡಾ. ಅನಂತಮೂರ್ತಿ ಸ್ವಾಗತಿಸಿ, ಕಾರ್ಯದರ್ಶಿ ಕವಿತಾ ವಂದಿಸಿದರು. ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.



