ಉಡುಪಿ : ಯಕ್ಷಗಾನ ಕಲಾರಂಗದ ವತಿಯಿಂದ 2026ನೇ ಸಾಲಿನ ಯಕ್ಷನಿಧಿ ಡೈರಿಯನ್ನು ಬಾರ್ಕೂರು ಸಮೀಪದ ಬೆಣ್ಣೆಕುದುರು ಕುಲಮಹಾ ಸ್ತ್ರೀ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಅಮೃತೇಶ್ವರೀ ಮೇಳದ ಸಂಚಾಲಕರೂ, ಗೀತಾನಂದ ಫೌಂಡೇಶನ್ ಅಧ್ಯಕ್ಷರೂ ಆದ ಆನಂದ ಸಿ. ಕುಂದರ್ ಅವರು ಡೈರಿಯನ್ನು ಅನಾವರಣಗೊಳಿಸಿ, ಸಂಸ್ಥೆಯ ನಿರಂತರ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವೃತ್ತಿ ಮೇಳದ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘ ನೀಡುತ್ತಿರುವ 50% ರಿಯಾಯಿತಿಯ ಬಸ್‌ಪಾಸನ್ನು ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಅವರು ವಿವಿಧ ಮೇಳಗಳ ಪ್ರತಿನಿಧಿಗಳಿಗೆ ವಿತರಿಸಿದರು. 10 ತಿಂಗಳ ಅವಧಿಯ ಈ ಬಸ್‌ಪಾಸ್ ಸೌಲಭ್ಯವನ್ನು ಒಂದು ವರ್ಷಕ್ಕೆ ವಿಸ್ತರಿಸುವ ಬಗ್ಗೆ ಚಿಂತನೆ ಇದೆ ಎಂದು ಅವರು ತಿಳಿಸಿದರು.


ಪ್ರತಿ ವರ್ಷ 500ಕ್ಕೂ ಹೆಚ್ಚು ಕಲಾವಿದರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಪ್ರಾಸ್ತಾವಿಕ ಭಾಷಣದಲ್ಲಿ ಕಾರ್ಯದರ್ಶಿ ಮುರಳಿ ಕಡೆಕಾರ್ ಹೇಳಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ವಿವಿಧ ಮೇಳಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



