ಕುಂದಾಪುರ : ನಂದಿ ವೇಷ ಮಾಡಿಲ್ಲ ಎನ್ನುವ ಕಾರಣಕ್ಕೆ ಯಕ್ಷಗಾನ ಕಲಾವಿದರೋರ್ವರು ಇನ್ನೋರ್ವ ನಿತ್ಯ ಕಲಾವಿದನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾರಣ ಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ಯಕ್ಷಗಾನ ಮೇಳದ ಚೌಕಿಯಲ್ಲಿ ಈ ಹಲ್ಲೆ ನಡೆದಿದೆ. ನಿತ್ಯ ವೇಷಧಾರಿ ಪ್ರದೀಪ್ ನಾಯ್ಕ್ ಆಲೂರು ಎನ್ನುವ ಹುಡುಗನಿಗೆ ಸ್ತ್ರೀವೇಷಧಾರಿ ಪ್ರದೀಪ್ ಶೆಟ್ಟಿ ನಾರ್ಕಳಿ ಹಲ್ಲೆ ಮಾಡಿರುವ ವಿಡಿಯೋ ಇದು. ಯಕ್ಷಗಾನ ಮೇಳಗಳಲ್ಲಿ ಏನೇ ಸಮಸ್ಯೆಗಳು ಒದಗಿದರು ಅದು ಮೇಳದ ಮ್ಯಾನೇಜರ್ ಅಥವಾ ಭಾಗವತರ ಮೂಲಕ ಪರಿಹರಿಸಿಕೊಳ್ಳುವ ಪರಿಪಾಠ ಚಾಲ್ತಿಯಲ್ಲಿದೇ. ಅಲ್ಲಿಯೂ ಸಮಸ್ಯೆ ಪರಿಹಾರ ಕಾಣದೆ ಇದ್ದಲ್ಲಿ ಮೇಳದ ಯಜಮಾನದಲ್ಲಿ ಸಮಸ್ಯೆಗೆ ತಿರ್ಮಾನ ಪಡೆಯುವುದು ವಾಡಿಕೆ. ಆದರೆ ವೇಷ ಮಾಡಿಲ್ಲ ಎನ್ನುವ ಕಾರಣಕ್ಕೆ ಓರ್ವ ಕಲಾವಿದ ಇನ್ನೋರ್ವ ಕಲಾವಿದನಿಗೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದು ಎಷ್ಟು ಸರಿ ಎನ್ನುವುದು ಯಕ್ಷ ಪ್ರೇಮಿಗಳ ಪ್ರಶ್ನೆ. ಈಗಾಗಲೇ ಇಂತಹದೆ ಅಧಿಕ ಪ್ರಸಂಗದ ವಿಚಾರವಾಗಿ ಹಲ್ಲೆ ಮಾಡಿದ ಕಲಾವಿದ ಮೇಳದಲ್ಲಿ ಕುಖ್ಯಾತಿ ಪಡೆದಿದ್ದ ಎನ್ನಲಾಗಿದ್ದು, ಸದ್ಯದ ನಡೆದ ಹಲ್ಲೆ ಪ್ರಕರಣದ ಗಂಭಿರವಾಗಿ ಪರಿಗಣಿಸಿ, ಯಕ್ಷಗಾನದ ದೇವರ ಮನೆಯಾದ ಚೌಕಿಯಲ್ಲಿ ಕೈ ಮಾಡಿರುವ ಕಲಾವಿದನನ್ನು ಮೇಳದಿಂದ ಉಚ್ಛಾಟಿಸಿ ಕಾನೂನುನ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ…

ಇನ್ನು ಇದೇ ವಿಚಾರವಾಗಿ ದಲಿತ ಸಮುದಾಯದ ಕಲಾವಿದನ ಮೇಲೆ ಹಲ್ಲೆ ನಡೆಸಿರುವುದನ್ನು ನ್ಯಾಯವಾದಿ, ಹಿಂದುಳಿದ ವರ್ಗಗಳ ಆಯೋಗದ ಅರುಣ್ ಕುಂದರ್ ಕಲ್ಗದ್ದೆ ಖಂಡಿಸಿದ್ದಾರೆ. ನಮ್ಮ ಸಮಾಜದಲ್ಲಿ ಯಾರಿಗೂ ಯಾವ ಕಾರಣಕ್ಕೂ ಹಲ್ಲೆ ಮಾಡುವ ಅಧಿಕಾರ ನೀಡಿಲ್ಲ. ಸಮಸ್ಯೆ ಪರಿಹಾರ ಸಾಕಷ್ಟು ಮಾರ್ಗಗಳಿವೇ. ಓರ್ವ ವ್ಯಕ್ತಿಯನ್ನು ಸಾರ್ವಜನಿಕವಾಗಿ ಹಲ್ಲೆ ಮಾಡಿರುವುದರ ಜೊತೆಗೆ ಮಾನಸಿಕವಾಗಿ ಕುಗ್ಗಿಸಿರುವುದು ಖಂಡನೀಯ. ಹಲ್ಲೆ ಮಾಡಿದಾತನಿಗೆ ಕಾನೂನು ರೀತಿಯ ಕ್ರಮ ಜರುಗಬೇಕು ಮತ್ತು ಹಲ್ಲೆಗೊಳಗಾದ ಯುವಕನಿಗೆ ನ್ಯಾಯ ನೀಡಬೇಕು ಎಂದರು ಆಗ್ರಹಿಸಿದ್ದಾರೆ.