ಉಡುಪಿ : ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ 80ನೇ ಮನೆ ಹಸ್ತಾಂತರ ಕಾರ್ಯಕ್ರಮ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆಯಿತು. ಕಮಲಶಿಲೆ ಮೇಳದ ಕಲಾವಿದ ಹಾಗೂ ಯಕ್ಷಶಿಕ್ಷಣದ ಗುರು ವಿಘ್ನೇಶ್ ಪೈ ಅವರಿಗೆ ಏಳು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಮನೆಯನ್ನು ‘ಗಂಗಾಕೃಷ್ಣ’ ಎಂದು ಹೆಸರಿಸಲಾಗಿದ್ದು, ಕೃಷ್ಣ ಭಟ್ ಹಾಗೂ ಅವರ ಧರ್ಮಪತ್ನಿ ಗಂಗಮ್ಮ ಅವರ ಸ್ಮರಣಾರ್ಥವಾಗಿ, ಅವರ ಕುಟುಂಬದ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗಿದ್ದು, ಅವರ ಸುಪುತ್ರ ಪಿ. ದಾಮೋದರ ಭಟ್ ನೂತನ ಮನೆಯನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರು ಕಲಾರಂಗದ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ, ಕಲಾವಿದನಿಗೆ ಓದು, ಹಿರಿಯರ ಮಾರ್ಗದರ್ಶನ ಮತ್ತು ಪರಿಶುದ್ಧ ವ್ಯಕ್ತಿತ್ವ ಅತ್ಯಗತ್ಯ ಎಂದರು. ಖ್ಯಾತ ವೈದ್ಯ ಡಾ. ಜಗದೀಶ್ ಶೆಟ್ಟಿ ಕಲಾರಂಗದ ಪಾರದರ್ಶಕ ಕಾರ್ಯಪದ್ಧತಿಯನ್ನು ಶ್ಲಾಘಿಸಿದರು. ನಿವೃತ್ತ ಇಂಜಿನಿಯರ್ ಪಿ.ಎಲ್. ರಾವ್ ಕಲಾರಂಗದ ಚಟುವಟಿಕೆಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. ಪುತ್ತೂರು ದೇವಳದ ಆಡಳಿತ ಮುಕ್ತೇಸರ ಪಿ. ಕೃಷ್ಣಮೂರ್ತಿ ಭಟ್ ಮನೆಯನ್ನು ನಿರ್ಮಿಸುವ ಹಿನ್ನೆಲೆಯನ್ನು ವಿವರಿಸಿದರು. ಮನೆಯನ್ನು ನೀಡಿದ ದಾನಿಗಳಿಗೆ ವಿಘ್ನೇಶ್ ಪೈ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಕರಂಬಳ್ಳಿ ಸರಸ್ವತಿ ಶ್ರೀನಿವಾಸ ಬಾರಿತ್ತಾಯ, ಸಾವಿತ್ರಿ ಲಕ್ಷ್ಮೀನಾರಾಯಣ ರಾವ್, ಸರೋಜಾ ಪಿ.ಎಚ್. ಭಟ್, ಶಾಂತಾ ರಾಮ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ ಮಾತನಾಡಿದರು. ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್, ಅನಂತರಾಜ ಉಪಾಧ್ಯಾಯ, ನಿರಂಜನ ಭಟ್, ಪ್ರಸಾದ್ ರಾವ್, ಸುದರ್ಶನ್ ಬಾಯಿರಿ ಮುಂತಾದವರು ಭಾಗವಹಿಸಿದರು. ಸಮಾರಂಭದಲ್ಲಿ ಊರ ಪ್ರಮುಖರಾದ ಕೃಷ್ಣಮೂರ್ತಿ ಭಟ್, ಡಾ. ಶ್ರೀಕಾಂತ್ ಸಿದ್ದಾಪುರ, ಶಂಕರ ಐತಾಳ, ಗೋಪಾಲ್ ಕಾಂಚನ್, ನಾರಾಯಣ ಶೆಟ್ಟಿ ಹಾಗೂ ಕಮಲಶಿಲೆ ಮೇಳದ ಕಲಾವಿದರು ಉಪಸ್ಥಿತರಿದ್ದರು.



