ಉಡುಪಿ : ಯಕ್ಷಗಾನ ಕಲಾರಂಗದ 84ನೇ ಮನೆ ಹಸ್ತಾಂತರ ಕಾರ್ಯಕ್ರಮವು ಕಾಪು ತಾಲೂಕಿನ ಶಂಕರಪುರದಲ್ಲಿ ನಡೆಯಿತು. ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ದ್ವಿತೀಯ ವರ್ಷದ ಅರಿವಳಿಕೆ ತರಬೇತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಚೇತನ್ ಜೋಗಿ (ರತ್ನಾ ಜೋಗಿ ಹಾಗೂ ಉದಯ ಜೋಗಿ ಅವರ ಪುತ್ರ) ಅವರಿಗೆ ಆದಿಉಡುಪಿಯ ಮಹಾದಾನಿ ಗುರುರಾಜ ಅಮೀನ್ ಅವರ ಪ್ರಾಯೋಜಕತ್ವದಲ್ಲಿ ನವೀಕರಿಸಿದ ಜಯಲಕ್ಷ್ಮೀ ನಿಲಯ ಮನೆಯನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮವನ್ನು ಕಾಪು ಶಾಸಕ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಯಕ್ಷಗಾನ ಕಲಾರಂಗದ ಸಾಮಾಜಿಕ ಬದ್ಧತೆ ಹಾಗೂ ಸೇವಾಕಾರ್ಯಗಳು ಇತರ ಸಂಘಟನೆಗಳಿಗೆ ಮಾದರಿಯಾಗಿವೆ ಎಂದು ಪ್ರಶಂಸಿಸಿದರು.

ಆದರ್ಶ ಆಸ್ಪತ್ರೆಯ ಆಡಳಿತಾಧಿಕಾರಿ ವಿಮಲಾ ಚಂದ್ರಶೇಖರ್ ಮಾತನಾಡಿ, ಅರ್ಹರಿಗೆ ಯಾವುದೇ ಆಡಂಬರವಿಲ್ಲದೆ ಸರಳ ಸಮಾರಂಭದ ಮೂಲಕ ಮನೆ ಹಸ್ತಾಂತರಿಸುವ ಕಲಾರಂಗದ ಕ್ರಮ ಶ್ಲಾಘನೀಯ ಎಂದರು. ಗುರುರಾಜ ಅಮೀನ್ ಅವರು ವಿದ್ಯಾರ್ಥಿಗೆ ತಾಯಿ–ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಜಯಲಕ್ಷ್ಮೀ ಗುರುರಾಜ ಅಮೀನ್, ನಿವೃತ್ತ ಪ್ರಾಧ್ಯಾಪಕಿ ಶಾರದಾ, ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು.



