Wednesday, April 8, 2026

spot_img

ಯಕ್ಷಗಾನ ಕಲಾರಂಗದ ಸೇವೆ ಎಲ್ಲ ಸಂಘಟನೆಗಳಿಗೆ ಮಾದರಿ: ಆನಂದ ಸಿ. ಕುಂದರ್

ಉಡುಪಿ : ಯಕ್ಷಗಾನ ಕಲಾರಂಗ ಸಂಸ್ಥೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಎಲ್ಲ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ. ಕುಂದರ್ ಅಭಿಪ್ರಾಯಪಟ್ಟರು. ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್, ಉಡುಪಿ ವತಿಯಿಂದ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಒಂದುವಾರದ ಯಕ್ಷಶಿಕ್ಷಣ ನಿವಾಸ ಶಿಬಿರ–2026ನ್ನು ಅವರು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲಾರಂಗವು ಯಕ್ಷಗಾನ ಕಲೆಯ ಉತ್ತೇಜನ, ಕಲಾವಿದರ ಕಲ್ಯಾಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಹಾಗೂ ಯಕ್ಷಗಾನ ತರಬೇತಿ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಪರಿಶ್ರಮ ಮತ್ತು ಪಾರದರ್ಶಕತೆಯಿಂದ ಸಂಸ್ಥೆ ಸಮಾಜದ ವಿಶ್ವಾಸವನ್ನು ಗಳಿಸಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಎ. ಸುವರ್ಣ ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯಗಳು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಕಾರ್ಯಕ್ಕೆ ಎಲ್ಲರೂ ಅಭಿನಂದನಾರ್ಹರು ಎಂದರು.

ಅಭ್ಯಾಗತರಾಗಿ ಉದ್ಯಮಿ ಪಿ. ನಟರಾಜ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ ಸುಧೀರ್ ಕುಮಾರ್ ಶೆಟ್ಟಿ, ಪಶುವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಟ್ರಸ್ಟಿಗಳು ಮೀನಾಲಕ್ಷಣಿ ಅಡ್ಯಂತಾಯ, ನಾರಾಯಣ ಎಂ. ಹೆಗಡೆ, ಕೋಶಾಧಿಕಾರಿ ಗಣೇಶ್ ಬ್ರಹ್ಮಾವರ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 104 ವಿದ್ಯಾರ್ಥಿಗಳು ಭಾಗವಹಿಸಿದ್ದು, ಗುರು ಬನ್ನಂಜೆ ಸಂಜೀವ ಸುವರ್ಣ ಅವರ ಮಾರ್ಗದರ್ಶನದಲ್ಲಿ ನರಸಿಂಹ ತುಂಗ, ಲಂಬೋದರ ಹೆಗಡೆ, ಶ್ರೀಧರ ಹೆಗಡೆ, ಮನೋಜ್, ಆದ್ಯತಾ ಭಟ್, ಶಿಶಿರ, ಪ್ರಶಾಂತ, ಶ್ರುತಿ, ಕಾರ್ತಿಕ್ ಭಟ್ ಸೇರಿದಂತೆ ತಂಡದವರು ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ, ಅಭಿನಯ, ಮುಖವರ್ಣಿಕೆ, ವೇಷಭೂಷಣ ಸೇರಿದಂತೆ ಯಕ್ಷಗಾನದ ವಿವಿಧ ಆಯಾಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾಪ್ರಸಾದ್ ವಂದಿಸಿದರು. ನಿರಂಜನ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles