Wednesday, May 7, 2025

spot_img

ಯಕ್ಷಗಾನವನ್ನು ವಿಶ್ವ ಧರ್ಜೆಯ ಕಲೆಯನ್ನಾಗಿಸುವಲ್ಲಿ ಕರಾವಳಿಗರ ಕೊಡುಗೆ ಅಪಾರ : ಪ್ರೊ.ಹಿ.ಚಿ.ಬೋರಲಿಂಗಯ್ಯ

ಉಡುಪಿ : ಬಯಲು ಸೀಮೆಯ ಮೂಡಲಪಾಯ, ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತಾ ಮೊದಲಾದ ಕಲಾಪ್ರಕಾರಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿನಲ್ಲಿವೆ. ಆದರೆ ಕರಾವಳಿಯ ಯಕ್ಷಗಾನ ಇಂದು ವಿಶ್ವಧರ್ಜೆಯ ಕಲೆಯಾಗಿ ಮೆರೆಯುವಂತೆ ಮಾಡಿದ ಇಲ್ಲಿನ ವಿದ್ಯಾವಂತರು, ಕಲಾ ಪ್ರೋತ್ಸಾಹಕರು ಅಭಿನಂದನಾರ್ಹರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು. ಅವರು ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ, ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಬಣ್ಣ 11’ ಪಂಚದಿನ ನಾಟಕೋತ್ಸವದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡ ಮಾಡುವ 2025ನೇ ಸಾಲಿನ ‘ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ’ ಯನ್ನು ಸ್ವೀಕರಿಸಿ ಮಾತನಾಡಿದರು.

ಬಯಲು ಸೀಮೆಯಲ್ಲಿ ಇಲ್ಲಿನ ಯಕ್ಷಗಾನದಂತೆ ಮೂಡಲಪಾಯ ಯಕ್ಷಗಾನವಿತ್ತು. ಆದರೆ ಅದು ಇಂದು ಬಹುತೇಕ ನಾಶವಾಗಿ ಹೋಗಿದೆ. ಉತ್ತರ ಕರ್ನಾಟಕದಲ್ಲಿ ಶ್ರೀಕೃಷ್ಣ ಪಾರಿಜಾತವಿತ್ತು. ಅದು ಕೂಡಾ ನಾಮವಶೇಷವಾಗಿ ಹೋಗಿದೆ. ಆದರೆ ಕರಾವಳಿಯಲ್ಲಿ ಯಕ್ಷಗಾನವನ್ನು ವಿಶ್ವಧರ್ಜೆಯ ಪ್ರಮುಖ ಕಲೆ ಎಂಬುದನ್ನು ವಿಶ್ವದಾದ್ಯಂತ ಪರಿಗಣಿಸುವ ಹಾಗೆ ಕರಾವಳಿಯ ಜನತೆ ಮಾಡಿದ್ದಾರೆ. ಆದಕ್ಕೆ ಕಾರಣ ಇಲ್ಲಿನ ವಿದ್ಯಾವಂತರು ಆಸಕ್ತಿಯಿಂದ ಕಲೆಗೆ ಪ್ರವೇಶ ಮಾಡಿರುವುದು. ಆದರೆ ಮೂಡಲಪಾಯ ಯಕ್ಷಗಾನ ಮತ್ತಿತರ ಪ್ರಾಕಾರಗಳಿಗೆ ವಿದ್ಯಾವಂತರ ಪ್ರವೇಶ ಆಗಲೇ ಇಲ್ಲ. ಕರಾವಳಿಯಲ್ಲಿ ಯಕ್ಷಗಾನದ ಜೊತೆಗೆ ನಾಟಕ ಕಲೆಯನ್ನು ಕೂಡಾ ಉಳಿಸಿಕೊಂಡು ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಯುವಜನತೆಯನ್ನು ಈ ಕಲೆಗಳಲ್ಲಿ ತೊಡಗಿಸಿಕೊಂಡು ಮಾಡಿರುವಂತಹ ನಿಮ್ಮ ಕಲೆಯ ಮೇಲಿನ ಪ್ರೀತಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪ್ರೊ.ಬೋರಲಿಂಗಯ್ಯ ಅವರ ಧರ್ಮಪತ್ನಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ ಅವರು ಮಲ್ಲಿಗೆ ಮುಡಿಸಿ, ಅರಶಿನ ಕುಂಕುಮ ಹಚ್ಚಿ, ಸೀರೆಯನ್ನು ಕಾಣಿಕೆಯಾಗಿ ನೀಡಿ ಕರಾವಳಿಯ ಸಂಪ್ರದಾಯವನ್ನು ಮೆರೆದರು. ನನಗೆ ಆತ್ಮೀಯ ಸನ್ಮಾನ ಕಂಡು ಹೃದಯ ತುಂಬಿ ಬಂದಿದೆ. ಈ ಸನ್ಮಾನ ನನ್ನ 1983ರಲ್ಲಿ ನಡೆದ ಮದುವೆ ದಿನವನ್ನು ನೆನಪಿಸಿತು. ಈ ಆತ್ಮೀಯ ಸನ್ಮಾನಕ್ಕೆ ಡಾ.ತಲ್ಲೂರು ಅವರ ತಂಡವನ್ನು ಅಭಿನಂದಿಸುತ್ತೇನೆ ಎಂದು ಪ್ರೊ.ಬೋರಲಿಂಗಯ್ಯ ಹೇಳಿದರು.  ಮುಂದಿನ ದಿನಗಳಲ್ಲಿ ಡಾ.ತಲ್ಲೂರು ಅವರ ಅಧ್ಯಕ್ಷತೆಯ ಜಿಲ್ಲಾ ಜಾನಪದ ಪರಿಷತ್ತು ಘಟಕ ಹಾಗೂ ರಾಜ್ಯ ಘಟಕ ಸೇರಿ ಉತ್ತಮವಾದ ಕೆಲಸಗಳನ್ನು ಮಾಡಲಿದ್ದೇವೆ ಎಂಬ ಭರವಸೆ ನೀಡಿದರು.

ಪ್ರಸಸ್ತಿಯ ರೂವಾರಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ಭೂಮಿಕಾ ಹಾರಾಡಿ ಸಹಕಾರದಲ್ಲಿ ಪ್ರತೀ ವರ್ಷ ಬಣ್ಣ ನಾಟಕೋತ್ಸವದಲ್ಲಿ ಜಾನಪದ ಪರಿಷತ್ತಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಬಾರಿ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರಿಗೆ ಈ ಜಾನಪದ ಗೌರವ ನೀಡುತ್ತಿರುವುದು ಸಂತೋಷ ತಂದಿದೆ ಎಂದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, 60 ವರ್ಷದವರೆಗೆ ದುಡಿದು ತನ್ನ ಗಳಿಕೆಯ ಹಣವನ್ನು ಸಮಾಜಕ್ಕೆ ಅದರಲ್ಲೂ ಮುಖ್ಯವಾಗಿ ಯಕ್ಷಗಾನದಂತಹ ಕಲೆಯ ಬೆಳವಣಿಗೆಗೆ ವಿನಿಯೋಗಿಸುತ್ತಿರುವ ಡಾ.ತಲ್ಲೂರು ಅವರ ಸೇವಾಕಾರ್ಯ ಬೆರಗು ಹುಟ್ಟಿಸುವಂತಹದ್ದು. ಅವರ ಕಲೆಯ ಮೇಲಿನ ಪ್ರೀತಿ ಅಗಾಧವಾದದ್ದು. ಜಿಲ್ಲೆಯಲ್ಲಿ ಜಾನಪದ ಪರಿಷತ್ತು ಎಂಬುದು ಇದೆ ಎಂಬುದನ್ನು ಗೊತ್ತು ಮಾಡಿರುವ ಕೀರ್ತಿ ಅವರಿಗೆ ಸಲ್ಲಬೇಕು. ಹಿಂದೆ ಯಕ್ಷಗಾನ ಕಲೆಗೆ ರಾಜಾಶ್ರಯವಿತ್ತು. ನಮ್ಮನಾಳುವ ಸರಕಾರಗಳು ಕಲೆ, ಸಂಸ್ಕೃತಿಯ ಉಳಿವಿಗೆ ಎಷ್ಟು ಪ್ರೋತ್ಸಾಹ ಕೊಡುತ್ತಿವೆ ಎಂಬುದನ್ನು ಪ್ರಜ್ಞಾವಂತರು ವಿವೇಚಿಸಬೇಕು. ಸರಕಾರಕ್ಕೆ ಇದೊಂದು ಮುಖ್ಯ ವಿಷಯವೇ ಅಲ್ಲ ಎಂಬoತಾಗಿರುವುದು ವಿಶಾದನೀಯ. ಇಂದು ಸರಕಾರ ಮಾಡಬೇಕಾದ ಕೆಲಸವನ್ನು ಡಾ.ತಲ್ಲೂರು, ಡಾ. ಬಲ್ಲಾಳ್ ಅವರಂತ ಸಹೃದಯರು ಮಾಡುತ್ತಿದ್ದಾರೆ. ಹತ್ತಾರು ಸಂಘಟನೆಗಳು ಅಂಬಲಪಾಡಿ ದೇವಳದ ವಿಶೇಷ ಅನುದಾನದಿಂದ ಉಸಿರಾಡುತ್ತಿವೆ. ಸರಕಾರ ಎಚ್ಚೆತ್ತುಕೊಳ್ಳುವುದು ಯಾವಾಗ ? ಎಂದು ಮಾರ್ಮಿಕವಾಗಿ ನುಡಿದರು.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, ಡಾ.ತಲ್ಲೂರು ಶಿವರಾಮ ಶೆಟ್ಟರು ಯಕ್ಷಗಾನ, ಜಾನಪದ, ನಾಟಕ ರಂಗಕ್ಕೆ ನೀಡುತ್ತಿರುವ ಕೊಡುಗೆ ಇತರರಿಗೆ ಮಾದರಿಯಾಗಿದೆ. ನಮ್ಮ ಸಂಸ್ಕೃತಿಯ ಉಳಿವಿಗೆ ಸರಕಾರದ ಕಣ್ಣುತೆರೆಸುವ ಕಾರ್ಯ ನಡೆಯಲೇ ಬೇಕಾಗಿದೆ ಎಂದರು. ರೋಟರಿ ಪ್ರಮುಖ ಜ್ಞಾನವಸಂತ ಶೆಟ್ಟಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ ನಾಯಕ್, ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ.ಬಂಗೇರ, ಖಜಾಂಚಿ ಪ್ರಶಾಂತ್ ಭಂಡಾರಿ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಆರ್.ಎಂ.ಸಾಮಗ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ತಲ್ಲೂರು ಶಿವಪ್ರಸಾದ್ ಶೆಟ್ಟಿ,  ಅನುಷಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ರವಿರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಭೂಮಿಕಾ ಹಾರಾಡಿ ಸಂಸ್ಥೆಯ ರವಿ ಎಸ್. ಪೂಜಾರಿ ಸ್ವಾಗತಿಸಿ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ನ ಟ್ರಸ್ಟಿ ಗಿರಿಜಾ ಶಿವರಾಮ ಶೆಟ್ಟಿ ಸನ್ಮಾನಿತರ ಪರಿಚಯಿಸಿದರು. ಅಧ್ಯಕ್ಷ ರಾಮ ಶೆಟ್ಟಿ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles