Friday, March 21, 2025

spot_img

ಯಕ್ಷಗಾನದ ಬೆಳವಣಿಗೆಗೆ ಕಟೀಲು ಕ್ಷೇತ್ರದ ಕೊಡುಗೆ ಅದ್ವಿತೀಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಕಟೀಲು ಕ್ಷೇತ್ರದಲ್ಲಿ ಇವತ್ತು 6 ಯಕ್ಷಗಾನ ಮೇಳಗಳಿವೆ. ಆರು ಮೇಳಗಳಿಗೂ ಪ್ರತಿರಾತ್ರಿ ಯಕ್ಷಗಾನ ಕಾರ್ಯಕ್ರಮವಿದೆ. ಅಲ್ಲದೆ ಹಲವಾರು ವರ್ಷಗಳವರೆಗೆ ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿದೆ. ಇದು ದುರ್ಗಾ ಮಾತೆಯ ಲೀಲೆಯೂ ಹೌದು, ಯಕ್ಷಗಾನದ ಶಕ್ತಿಯೂ ಹೌದು. ಯಕ್ಷಗಾನದ ಬೆಳವಣಿಗೆಗೆ ಕಟೀಲು ಕ್ಷೇತ್ರದ ಕೊಡುಗೆ ಶ್ಲಾಘನೀಯ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಥಮ ಧರ್ಜೆ ಕಾಲೇಜಿನ  ಸಭಾಭವನದಲ್ಲಿ ಶ್ರೀ ದುರ್ಗಾ ಮಕ್ಕಳ ಮೇಳ ಕಟೀಲು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಯೋಗದಲ್ಲಿ ಹಮ್ಮಿಕೊಂಡ ಎರಡು ದಿನಗಳ ಯಕ್ಷಗಾನ ತಾಳಮದ್ದಲೆ ಕಮ್ಮಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಕ್ಷಗಾನ ನಮ್ಮ ಮಣ್ಣಿನ ಕಲೆ. ಇದು ಅನ್ಯ ಕಲಾಪ್ರಕಾರಗಳ ಹಾಗೆ ಅಲ್ಲ. ಇಲ್ಲಿ ಅಭಿನಯ, ನೃತ್ಯ, ಮಾತು , ಹಾಡು, ವೇಷಭೂಷಣ, ಬಣ್ಣಗಾರಿಕೆ ಹೀಗೆ ನವರಸ ಭಾವಾಭಕ್ತಿಗೆ ಅವಕಾಶವಿದೆ. ಯಕ್ಷಗಾನ ಕೇವಲ ಮನೋರಂಜನೆಗಾಗಿ ಅಲ್ಲ. ಇದು ಸುಸಂಸ್ಕೃತ ಸಮಾಜವನ್ನು ಕಟ್ಟಿಕೊಡಬಲ್ಲ ಶಕ್ತಿಹೊಂದಿದೆ. ಇದನ್ನು ಅಭ್ಯಾಸಿಸಿ ಪ್ರದರ್ಶಿಸುವ ಕಲಾವಿದರೆಲ್ಲಾ ಶ್ರೇಷ್ಠರೇ ಆಗಿದ್ದಾರೆ. ಯಕ್ಷಗಾನವನ್ನು ಕಲಿತ ಮಕ್ಕಳು ಗುರುಹಿರಿಯರಿಗೆ ಗೌರವ ಕೊಡುವುದು ಸೇರಿದಂತೆ ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಸಮಾಜದ ನೈಜ ಆಸ್ತಿಯಾಗಬಲ್ಲರು. ಹೀಗಾಗಿ ಯಕ್ಷಗಾನ ಅಕಾಡೆಮಿ ಮಕ್ಕಳ ಮೇಳಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ಅವರು ತಿಳಿಸಿದರು. ಹಿಂದೆ ಕಲೆಗಳಿಗೆ ರಾಜಾಶ್ರಯ ಸಿಕ್ಕಿದಂತೆ ಇಂದು ನಮ್ಮ ಶೃದ್ಧಾಕೇಂದ್ರಗಳಾಗಿರುವ ದೇವಳಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರುವುದು ಸಂತೋಷದ ವಿಚಾರ. ಇಂದು ಕಟೀಲು ದೇವಳದಿಂದ 6 ಮೇಳಗಳು, ಮಂದಾರ್ತಿ ದೇವಳದಿಂದ 5 ಮೇಳಗಳು ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ 40ಕ್ಕೂ ಅಧಿಕ ಯಕ್ಷಗಾನ ಮೇಳಗಳಿಂದು ಕಾರ್ಯಾಚರಿಸುತ್ತಿವೆ. ದುರ್ಗಾ ಮಕ್ಕಳ ಮೇಳದ ಸಾಧನೆಯನ್ನು ನಾನು ಗಮನಿಸಿದ್ದೇನೆ. ಯಕ್ಷಗಾನ ಅಕಾಡೆಮಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರಿಗೆ ನಿರಂತರ ಬೆಂಬಲ ನೀಡಲಿದೆ. ಯಕ್ಷಗಾನಕ್ಕೆ ಸಂಬoಧಪಟ್ಟ ವಿವಿಧ ಕಮ್ಮಟಗಳು, ತರಬೇತಿಗಳನ್ನು ನಡೆಸಲು ಸಂಘಸoಸ್ಥೆಗಳು ಮುಂದೆ ಬರಬೇಕು. ಅವುಗಳಿಗೆ ಅಕಾಡೆಮಿ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳದ ಅಧ್ಯಕ್ಷರು ಹಾಗೂ ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಯಕ್ಷಗಾನದ ತಾಳಮದ್ದಲೆ ಇಂದು ಬಹು ಜನಪ್ರಿಯತೆ ಪಡೆಯುತ್ತಿದೆ. ದೇವಿಗೆ ಅತೀ ಪ್ರಿಯವಾದ ಯಕ್ಷಗಾನವನ್ನು ಮಕ್ಕಳಿಗೆ ಅಭ್ಯಾಸಿಸಲು ಯಕ್ಷ ಝೇಂಕಾರ ಎಂಬ ವಿಭಾಗವನ್ನು ಕಾಲೇಜಿನಲ್ಲಿ ಪ್ರಾರಂಭಿಸಲಾಗಿದೆ. ಸಾತ್ವಿಕ ಅಭಿನಯದ ಈ ತಾಳಮದ್ದಲೆ ಬೆಳೆಯಲಿ ಎಂದು ಅವರು ಹಾರೈಸಿದರು. ಈ ಎರಡು ದಿನಗಳ ವಿಚಾರಗೋಷ್ಠಿಗಳಲ್ಲಿ ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯ, ಪ್ರಕೃತ ತಾಳಮದ್ದಲೆ ಸ್ಥಿತಿಗತಿ, ತಾಳಮದ್ದಲೆ ಔಚಿತ್ಯ ಪರಾಮರ್ಶೆ ಎಂಬ ವಿಷಯದಲ್ಲಿ 3 ವಿಚಾರಗೋಷ್ಠಿಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿ ಸದಸ್ಯ ರಾಜೇಶ್ ಕುಳಾಯಿ, ಸಿವಿಲ್ ಎಂಜಿನಿಯರ್ ದೊಡ್ಡಯ್ಯ ಮೂಲ್ಯ, ಕಟೀಲು ಕೊಂಡೆಲ್ತಾಯ ದೇವಳದ ಮೊಕ್ತೇಸರ ಲೋಕಯ್ಯ ಸಾಲ್ಯಾನ್, ಕಾಲೇಜಿನ ಪ್ರಾಂಶುಪಾಲ ಡಾ.ವಿಜಯ, ಕಸಾಪ ಮುಲ್ಕಿ ತಾಲೂಕು ಅಧ್ಯಕ್ಷ ಮಿಥುನ್ ಉಡುಪ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಕೃತ ಅಧ್ಯಾಪಕ ಶ್ರೀವತ್ಸ ಎಸ್.ಆರ್. ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles