Thursday, March 5, 2026

spot_img

ಯಕ್ಷಗಾನಕ್ಕೆ ಸಂಘಸoಸ್ಥೆಗಳ ಪ್ರೋತ್ಸಾಹ ಅಗತ್ಯ : ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

ಉಡುಪಿ : ಇಂದು ಯಕ್ಷಗಾನಕ್ಕೆ ಅನೇಕ ಸಂಘಸoಸ್ಥೆಗಳು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ಇದು ಅಕಾಡೆಮಿಯ ಕೆಲಸವನ್ನು ಬಹಳಷ್ಟು ಹಗರುವಾಗಿಸಿದೆ. ಮಕ್ಕಳ ಯಕ್ಷಗಾನ, ಮಹಿಳಾ ಯಕ್ಷಗಾನ ಸಂಸ್ಥೆಗಳು ಇದೀಗ ಹೆಚ್ಚಾಗಿ ಆರಂಭಗೊಳ್ಳುತ್ತಿರುವುದು ಯಕ್ಷಗಾನ ಕಲೆಯ ಭವಿಷ್ಯ ಭದ್ರವಾಗಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘ ಹಮ್ಮಿಕೊಂಡ 9ನೇ ವರ್ಷದ ಯಕ್ಷಗಾನ  ‘ರಾಜಾ ದಿಲೀಪ ‘ ಪ್ರಸಂಗದ ಪ್ರದರ್ಶನ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಯಕ್ಷಗಾನ ಅಕಾಡೆಮಿ ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಉತ್ಸುಕವಾಗಿದೆ. ಯಕ್ಷಗಾನದಲ್ಲಿ ಸಾಧಕರ ಕೊರತೆಯಿಲ್ಲ. ಯೋಗ್ಯ ಗುರುಗಳನ್ನು ಆರಿಸಿಕೊಂಡು ಅವರಿಂದ ಯಕ್ಷಗಾನದ ಹೆಜ್ಜೆಗಾರಿಕೆಯನ್ನು ಕಲಿತು ಮುಂದುವರಿದರೆ ಆ ಕಲಾಸಂಸ್ಥೆಗೆ ಉತ್ತಮ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದ ಸಾಧನೆ ಮಾದರಿಯಾಗಿದೆ. ಇಲ್ಲಿ ಸಣ್ಣ ಪ್ರಾಯದ ಮಕ್ಕಳಿಂದ ಹಿಡಿದು 84 ವರ್ಷದ ಮಹಿಳೆಯರು ಕೂಡಾ ಗೆಜ್ಜೆ ಕಟ್ಟಿ ಯಕ್ಷಗಾನ ಕಲಿತ್ತಿರುವುದನ್ನು ಕೇಳಿ ಸಂತೋಷ ಪಟ್ಟಿದ್ದೇನೆ. ಯಕ್ಷಗಾನಕ್ಕೆ ವಯೋಮಿತಿ ಮತ್ತಿತರ ಕಟ್ಟುಪಾಡುಗಳ ನಿರ್ಬಂಧವಿಲ್ಲ. ಇಲ್ಲಿ ಕಲಿಯಬೇಕು ಎನ್ನುವ ತುಡಿತವೇ ಅವರನ್ನು ಕಲಾವಿದರನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ಈ ಕಲಾಸಂಘಕ್ಕೆ ಆಶ್ರಯ ನೀಡಿ ಪ್ರೋತ್ಸಾಹ ನೀಡುತ್ತಿರುವ ಶೋಧನ್ ಕುಮಾರ್ ಶೆಟ್ಟಿ ಮತ್ತು ರೂಪಾರಾಣಿ ದಂಪತಿಯ ಕಲಾಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಅವರು ಹಾರೈಸಿದರು.

ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯಸ್ಥ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಯಕ್ಷಗಾನ ರಾಜ್ಯ ಕಲೆಯಾಗಿ ಘೋಷಣೆಯಾಗಬೇಕು. ಈ ಕುರಿತಂತೆ ಯಕ್ಷಗಾನ ಅಕಾಡೆಮಿ, ಕಲಾವಿದರು, ವಿಮರ್ಶಕರು ಎಲ್ಲಾ ಸೇರಿ ಕಾರ್ಯ ಎಸಗಬೇಕು. ನಮ್ಮ ಶಿಕ್ಷಣದ ಹಂತದಲ್ಲಿಯೇ ಯಕ್ಷಗಾನದಂತಹ ಕಲೆಯನ್ನು ಅಭ್ಯಾಸಿಸಿ ಬೆಳೆಯುವ ಹಾಗೆ ಮಾಡಿದರೆ, ಆ ವ್ಯಕ್ತಿ ಮುಂದೆ ಬಲು ದೊಡ್ಡ ಸೌಂದರ್ಯ ಪ್ರಜ್ಞೆಯುಳ್ಳವನಾಗಿ ಈ ದೇಶದ ಬಹು ದೊಡ್ಡ ಸಂಪತ್ತಾಗುವುದರಲ್ಲಿ ಸಂಶಯವಿಲ್ಲ. ಯಾರಿಗೆ ಸೌಂದರ್ಯ ಪ್ರಜ್ಞೆ ಇಲ್ಲವೋ ಆ ವ್ಯಕ್ತಿ ಈ ದೇಶಕ್ಕೆ ಬಲು ದೊಡ್ಡ ಅಪಾಯಕಾರಿಯಾಗಬಲ್ಲ. ಸೌಂದರ್ಯ ಪ್ರಜ್ಞೆ ಉಳ್ಳವನು ದೇಶವನ್ನು ಪ್ರೀತಿಸುತ್ತಾನೆ, ಕಲೆಯನ್ನು, ಪ್ರಕೃತಿಯನ್ನು ಪ್ರೀತಿಸುತ್ತಾನೆ. ಈ ಗುಣವಲ್ಲದವ ದೇಶಕ್ಕೆ ಅಪಾಯಕಾರಿ ಎಂದು ಅವರು ಅಭಿಪ್ರಾಯ ಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಗಂಡು ಕಲೆ ಎಂದು ಯಕ್ಷಗಾನವನ್ನು ಗುರುತಿಸಲಾಗಿದೆಯಾದರೂ ಅದನ್ನು ಹೆಣ್ಮಕ್ಕಳು ಕಲಿಯಬಾರದು ಎಂಬ ನಿಯಮವಿಲ್ಲ. ಇದೀಗ ಬಹು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಈ ಕಲೆಯನ್ನು ಅಭ್ಯಾಸಿಸುತ್ತಿರುವುದು ಸಂತೋಷದ ಸಂಗತಿ. ಹೀಗಾಗಿ ಭವಿಷ್ಯದಲ್ಲಿ ಯಕ್ಷಗಾನ ಕ್ಷಯವಾಗದು, ಅಕ್ಷಯವಾಗಿ ಬೆಳೆಯುವುದರಲ್ಲಿ ಸಂಶಯವಿಲ್ಲ ಎಂದರು. ವೇ.ಮೂ.ವಿಘ್ನೇಶ್ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸಾಲಿಗ್ರಾಮ ಮೇಳದ ಸಂಚಾಲಕ ಪಿ.ಕಿಶನ್ ಹೆಗ್ಡೆ, ಉದ್ಯಮಿಗಳಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ, ಶೋಧನ್ ಕುಮಾರ್ ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ, ಸುಗ್ಗಿ ಸುಧಾಕರ ಶೆಟ್ಟಿ, ಉದಯ ಶೆಟ್ಟಿ ಹಾಗೂ ಉಡುಪಿಯ ಖ್ಯಾತ ಸಂಗೀತ ವಿದ್ವಾನ್ ಲಕ್ಷ್ಮೀನಾರಾಯಣ ಉಪಾಧ್ಯ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶೋಧನ್ ಕುಮಾರ್ ಶೆಟ್ಟಿ ಮತ್ತು ರೂಪಾರಾಣಿ ದಂಪತಿಗೆ ಗೌರವಾರ್ಪಣೆ ನಡೆಯಿತು. ಯಕ್ಷಗಾನ ಗುರು ಬಡಾನಿಡಿಯೂರು ಕೇಶವ ರಾವ್ ಮತ್ತು ಯಕ್ಷಗಾನ ಕಲಾವಿದೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಪೂರ್ಣಿಮಾ ಯತೀಶ್ ರೈ ಅವರಿಗೆ ಗುರುವಂದನೆ ನಡೆಯಿತು. ಶಶಿಕಲಾ ಉದಯ ಶೆಟ್ಟಿ ಸ್ವಾಗತಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ  ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸಾಂಸ್ಕೃತಿಕ ಕಲಾ ಸಂಘದಿoದ `ರಾಜಾ ದಿಲೀಪ ‘ ಯಕ್ಷಗಾನ ಪ್ರಸ್ತುತಿಗೊಂಡಿತು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles