ಉಡುಪಿ : ಮರವಂತೆಯ ಕೊಲ್ಲೂರು ನದಿಯಲ್ಲಿ ಮೋಜು ಮಸ್ತಿಗೆ ತೆರಳಿದ್ದು, ಪ್ರವಾಸಿಗರ ಬೋಟ್ ಮಗುಚಿ, ನೀರು ಪಾಲಾದ ಇಬ್ಬರನ್ನು ಎನ್.ಡಿ.ಆರ್.ಎಫ್ ತಂಡವು ರಕ್ಷಣೆ ಮಾಡಿ ಪ್ರಾಣಾಪಾಯದಿಂದ ಪಾರು ಮಾಡಿದೆ. ಜಿಲ್ಲೆಯಲ್ಲಿ ಪ್ರವಾಸಕ್ಕೆ ಆಗಮಿಸಿದ್ದ ಯುವಕರ ತಂಡವು ವಿವಿಧ ಸ್ಥಳಗಳನ್ನು ವೀಕ್ಷಿಸಿ, ಮರವಂತೆ ಗ್ರಾಮದ ವರಾಹಸ್ವಾಮಿ ದೇವಸ್ಥಾನದ ಮುಂಭಾಗ ಹರಿಯುವ ಕೊಲ್ಲೂರು ನದಿಯಲ್ಲಿ ದೋಣಿ ವಿಹಾರಕ್ಕೆ ಹೋದಂತಹ ಸಂದರ್ಭದಲ್ಲಿ ಅಲ್ಲಿದ್ದ ಪೊಲೀಸರು ದೋಣಿ ವಿಹಾರಕ್ಕೆ ನಿರ್ಬಂಧವಿರುವುದಾಗಿ ತಿಳಿಸಿದರೂ ಅದನ್ನು ಲೆಕ್ಕಿಸದೇ ಪ್ರಕ್ಷುಬ್ಧ ವಾತಾವರಣವಿದ್ದರೂ ನದಿಗೆ ತೆರಳಿದಾಗ ಭಾರೀ ಗಾಳಿಗೆ ಅವರುಗಳು ಸಂಚರಿಸುತ್ತಿದ್ದ ಬೋಟ್ ಮಗುಚಿ ಅದರಲ್ಲಿದ್ದ ನಾಲ್ವರು ನೀರಿನಲ್ಲಿ ಮುಳುಗಿ, ಒಬ್ಬ ಈಜಿ ದಡ ಸೇರಿದರೆ, ಮತ್ತೊಬ್ಬ ಈಜು ಹೊಡೆದು ಸುಸ್ತಾಗಿ ಮುಳುಗುವ ಹಂತದಲ್ಲಿದ್ದಾಗ ಅಲ್ಲಿನ ಸ್ಥಳೀಯ ಜನರು ಹಗ್ಗದ ಸಹಾಯದಿಂದ ಅವರನ್ನು ಸುರಕ್ಷಿತವಾಗಿ ದಡಕ್ಕೆ ತಲುಪುವಂತೆ ಮಾಡಿದರು. ಸರಿಯಾಗಿ ಈಜು ಬಾರದೆ ಮುಳುಗುವ ಹಂತದಲ್ಲಿದ್ದ ಮತ್ತೊಬ್ಬನನ್ನು ಸ್ಥಳೀಯ ನಾಗರಿಕರು ನೀರಿನಿಂದ ಎಳೆದು ತಂದು ದಡ ಸೇರಿಸಿ ರಕ್ಷಿಸಿದರು. ಮತ್ತೊಬ್ಬ ಸ್ನೇಹಿತನು ಕಾಣದೇ ಇರುವುದನ್ನು ಕಂಡ ಇತರೆ ಪ್ರವಾಸಿಗರು ಅವರನ್ನು ರಕ್ಷಿಸುವಂತೆ ಸ್ಥಳೀಯ ಜನರ ಬಳಿ ಗೋಗರೆಯುತ್ತಿದ್ದರು.

ಆಗ ಸ್ಥಳಕ್ಕೆ ಆಗಮಿಸಿದ ಎನ್.ಡಿ.ಆರ್.ಎಫ್ ತಂಡವು ತಮ್ಮ ಬೋಟ್‌ಗಳ ಮೂಲಕ ಕಾಣೆಯಾದ ಯುವಕನನ್ನು ಹುಡುಕಲು ಮೂರು ಬೋಟ್‌ಗಳಲ್ಲಿ ತೆರಳಿದರು. ನಾಪತ್ತೆಯಾಗಿದ್ದವನ್ನು ಹುಡುಕಾಡತೊಡಗಿದರು. ಆತ ಕಾಣದೇ ಇದ್ದಾಗ ಎನ್.ಡಿ.ಆರ್.ಎಫ್ ನ ಆರೇಳು ಜನ ಸಿಬ್ಬಂದಿಗಳು ನದಿ ಪಾತ್ರದಲ್ಲಿ ತೆರಳಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆ, ಮುಳುಗುತಜ್ಞರಿಂದ ಹುಡುಕಾಟ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲಿಯೇ ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ಎಳೆದು ತಂದು ಬೋಟ್‌ನಲ್ಲಿ ಹತ್ತಿಸಿಕೊಂಡು ದಡಕ್ಕೆ ತಂದರು. ಆ ಕ್ಷಣದಲ್ಲಿ ಆತ ಉಸಿರಾಟ ಇಲ್ಲದೇ ನಿಂತಿರುವುದನ್ನು ಕಂಡು ಆತನಿಗೆ ಸಿ.ಪಿ.ಆರ್ ಮಾಡುವುದರೊಂದಿಗೆ ಕೃತಕ ಉಸಿರಾಟ ನೀಡಿದ ಹಿನ್ನೆಲೆ, ಆತ ಉಸಿರಾಟ ಪುನರಾರಂಭಿಸಿದರು. ಸ್ಥಳೀಯ ಬೈಂದೂರಿನ ವೈದ್ಯರು ಅವರನ್ನು ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದರು. ಇದರೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಎನ್.ಡಿ.ಆರ್.ಎಫ್ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ ಪ್ರವಾಹ ಕುರಿತ ಅಣುಕು ಪ್ರದರ್ಶನವು ಸಮಾಪ್ತಿಗೊಂಡಿತು.

ಇದೇ ಸಂದರ್ಭದಲ್ಲಿ ಅಣುಕು ಪ್ರದರ್ಶನ ಉದ್ದೇಶಿಸಿ ಸಹಾಯಕ ಕಮೀಷನರ್ ರಶ್ಮಿ ಮಾತನಾಡಿ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಮಾಡುವುದರೊಂದಿಗೆ ಜನರ ಪ್ರಾಣ, ಆಸ್ತಿ-ಪಾಸ್ತಿಗಳನ್ನು ಉಳಿಸುವ ನಿಟ್ಟಿನಲ್ಲಿ ಅಭ್ಯಾಸದ ದೃಷ್ಠಿಯಿಂದ ಇಂದು ಮರವಂತೆಯಲ್ಲಿ ಪ್ರವಾಹ ಕುರಿತ ಅಣುಕು ಪ್ರದರ್ಶನವನ್ನು ನಡೆಸಲಾಯಿತು. ಈ ಅಣುಕು ಪ್ರದರ್ಶನವು ನೈಜವಾಗಿ ನಡೆದಿದೆ ಎಂಬ ರೀತಿಯಲ್ಲಿ ಕಂಡುಬಂದಿದ್ದು, ವಿಶೇಷವಾಗಿತ್ತು. ಇಂತಹ ಅಭ್ಯಾಸಗಳು ಭವಿಷ್ಯದ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. ಕೆಲವೊಮ್ಮೆ ಪರಿಣಿತಿ ಇಲ್ಲದೇ ರಕ್ಷಣಾ ಕಾರ್ಯಾಚರಣೆ ಮಾಡಿದಂತಹ ಸಂದರ್ಭದಲ್ಲಿ ಪ್ರಾಣಾಪಾಯಗಳಾಗುವ ಸಾಧ್ಯತೆ ಇರುತ್ತವೆ. ಅನುಭವ ಹಾಗೂ ಕುಶಲತೆಯಿಂದ ರಕ್ಷಣಾ ಕಾರ್ಯಗಳನ್ನು ಮಾಡಿದಾಗ ಎಲ್ಲರನ್ನೂ ಉಳಿಸಲು ಸಾಧ್ಯ. ಈ ಅಣುಕು ಪ್ರದರ್ಶನ ಒಂದು ಮಾದರಿ. ಸಾರ್ವಜನಿಕರು ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ನೀಡುವಂತಹ ಎಚ್ಚರಿಕೆಯ ಆದೇಶ ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಯು ಕಲ್ಲುಟಕರ್, ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ರವಿ, ಬೈಂದೂರು ತಹಶೀಲ್ದಾರ್ ರಾಮಚಂದ್ರಪ್ಪ, ಇ.ಓ. ರಾಜ್‌ಕುಮಾರ್, ಬಿ.ಓ ನಾಗೇಶ್ ನಾಯ್ಕ್, ಬೈಂದೂರು ಎನ್.ಡಿ.ಆರ್.ಎಫ್ 10 ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ವಿದ್ಯಾರ್ಥಿಗಳು, ಸ್ಥಳೀಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


