ಉಡುಪಿ: ಸಂಘ ಸಂಸ್ಥೆಗಳಿಂದ ಉತ್ತಮ ಕಾರ್ಯಗಳು ನಡೆದರೆ ಅದು ಸಮಾಜದ ಉನ್ನತಿ ಕಾರಣ ಆಗುತ್ತದೆ ಎಂದು ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಅವರು ಮೂಡುಪೆರಂಪಳ್ಳಿಯ ವಿಶ್ವಪ್ರಿಯ ಬಯಲು ರಂಗಮಂಟಪದಲ್ಲಿ ನಡೆದ ನವ ಚೈತನ್ಯ ಯುವಕ ಮಂಡಲದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಎಲ್ಲಿ ಸಜ್ಜನರಿಗೆ ಗೌರವ ಆದರಗಳು ನಡೆಯುತ್ತಿವೆ ಎಂದಾದರೆ ಆ ಸಂಘಗಳು ಉತ್ತಮ ಕಾರ್ಯಗಳನ್ನು ನಡೆಸುತ್ತಿವೆ ಎಂದರ್ಥ. ಮೂಡುಪೆರಂಪಳ್ಳಿ ನವಚೈತನ್ಯ ಯುವಕ ಮಂಡಲದ 40 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವುದು ದೊಡ್ಡ ಸಾಧನೆಯೇ ಸರಿ. ಆರಂಭದಿಂದಲೂ ಈ ಸಂಘ ಅದಮಾರು ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ನಮ್ಮ ಗುರುಗಳಿಗೂ ಈ ಸಂಘದ ಮೇಲೆ ವಿಶೇಷ ಆಧಾರ ಅಭಿಮಾನ ಇದೆ, ಮುಂದೆಯೂ ಈ ಸಂಘಟನೆ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿ ಆಗಲಿ ಎಂದು ಅವರು ಹಾರೈಸಿದರು. ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಮೂಡು ಪೆರಂಪಳ್ಳಿ ಯುವಕ ಮಂಡಲ ಹೆಸರಿಗೆ ತಕ್ಕಂತೆ ನವ ಚೈತನ್ಯದಿಂದ ಬೆಳೆಯುತ್ತಿರುವುದು ಸಂತೋಷದ ಸಂಗತಿ. ಈ ಸಂಘದ ಉತ್ತಮ ಕಾರ್ಯಗಳು ಸಮಾಜ ಮುಖಿ ಆಗಿರುವುದರಿಂದಲೇ ಅದಮಾರು ಶ್ರೀಗಳು 5 ಸೆಂಟ್ಸ್ ಜಾಗ ಕೇಳಿದಾಗ 42 ಸೆಂಟ್ಸ್ ಜಾಗವನ್ನು ನೀಡಿ ಔದಾರ್ಯವನ್ನು ತೋರಿದ್ದಾರೆ. ಅದಮಾರು ಮಠದ ಸಾಮಾಜಿಕ ಸ್ಪಂದನೆ ಹಾಗೂ ಸಾಮಾಜಿಕ ಕಾರ್ಯಗಳು ಅಗ್ರಗಣ್ಯವಾಗಿವೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂಘದ ವತಿಯಿಂದ ವಜ್ರ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವಚೈತನ್ಯ ಯುವಕ ಮಂಡಲದ ಅಧ್ಯಕ್ಷರಾದ ಜಿತೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಡಾ. ತಲ್ಲೂರು ಅವರ ಧರ್ಮಪತ್ನಿ ಗಿರಿಜಾ ಶಿವರಾಮ ಶೆಟ್ಟಿ, ಮಾಜಿ ನಗರಸಭಾ ಸದಸ್ಯರಾದ ಅನಿತಾ ಬೆಳಿಂಡ ಉಪಸ್ಥಿತರಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸಂಗೀತ ಕ್ಷೇತ್ರದಲ್ಲಿ ಸಾದನೆಗೆ ಲಿಯೋನ ಒಲಿವೆರ ಅವರಿಗೆ ಗೌರವಾರ್ಪಣೆ ನಡೆಯಿತು. ಸಂಸ್ಥೆಯಲ್ಲಿ ನಿರಂತರ ಸೇವೆ ಸಲ್ಲಿಸಿದ ಹಿರಿಯ ಸದಸ್ಯರಾದ ಸುರೇಂದ್ರ ಪೂಜಾರಿ ಮತ್ತು ರವೀಂದ್ರ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ವಾಕಿಟಾಕಿ ಖರೀದಿಸಲು ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಪಿನ್ ಹಾಗೂ ಕಾರ್ಯದರ್ಶಿ ವಿಶಾಲ್, ಕೋಶಾಧಿಕಾರಿ ಶಂಕರ್ ಕುಲಾಲ್ ಪೆರಂಪಳ್ಳಿ ಉಪಸ್ಥಿತರಿದ್ದರು.



