ಇಂದಿಗೂ ಇಡ್ಲಿ ಬೆಳಗಿನ ತಿಂಡಿಗಳ ರಾಜನೇ… ಅದನ್ನು ಮುಂಡ್ಕನ ಓಲೆ, ಹಲಸಿನ ಎಲೆ ಕೊಟ್ಟೆ ಯಲ್ಲಿ ಮಾಡಿದಾಗ ಎಲೆಯ, ಓಲೆಯ ಪರಿಮಳ ಕಡುಡು ಅಟ್ಟದಲ್ಲಿ ಬೇಯುವಾಗ, ಹೊರಬರುವ ಉಗಿ ಅಂದರೆ ಸ್ಟೀಮ್ ನಲ್ಲೇ ತಿಳಿಯುತ್ತದೆ. ಕೊಟ್ಟೆ ಅದರಲ್ಲೂ ಮುಂಡ್ಕನ ಓಲೆಯ ಸುತ್ತ ಇರುವ ಮುಳ್ಳನ್ನು ಸವರಿ, ಅದನ್ನು ಬೆಂಕಿಯಲ್ಲಿ ಹದವಾಗಿ ಬಾಡಿಸಿ, ಆ ಓಲೆಯನ್ನು ವರ್ತುಲವಾಗಿ ಸುತ್ತಿ, ನಂತರ ಕೊಟ್ಟೆ ಮಾಡುವುದು ಅನಾದಿ ಕಾಲದ ಹಬ್ಬದ ತಯಾರಿ… ನಂತರ ಎರಡೇ ಎರಡು, ತೆಂಗಿನ ಓಲೆಯಿಂದ ಮಾಡಿದ ಪರಕೆ, ಕಡ್ಡಿ ತುಂಡುಗಳಿಂದ, ಮೇಲೆ ಒಂದು, ಕೆಳಗೆ ಒಂದು ಓಲೆಯ ನಡುವೆ, ಕಡ್ಡಿ ಪೋಣಿಸಿ ಕೊಟ್ಟೆ ಮಾಡುವ ವಿಧಾನ ನಿಜಕ್ಕೂ ಅಧ್ಬುತ…

ಹಲವು ವರ್ಷ ಗಳ ಹಿಂದೆ ಇನ್ನೂ ಮಿಕ್ಸಿ, ವಿದ್ಯುತ್ ಚಾಲಿತಅರೆಯುವ ಕಲ್ಲು ಇಲ್ಲದ ಕಾಲದಲ್ಲಿ ಹಿರಿಯ ಮಹಿಳೆಯರು, ಕೂಡು ಕುಟುಂಬ ಕ್ಕೆ, ಹಬ್ಬದ ಸಂಭ್ರಮ ವಾಗಿ, ಚೌತಿಗೆ ಕಡುಬು, ದೀಪಾವಳಿ, ದ್ವಾದಶಿ ತುಳಸಿ ಪೂಜೆಗೆ ಉದ್ದಿನ ದೋಸೆ ಹೀಗೆ ಹಲವು ಬಗೆಯ ತಯಾರಿ ಯ ಸಂಭ್ರಮವಿತ್ತು. ಸೇರು ಅಂದರೆ ಸುಮಾರು ಒಂಬತ್ತು ನೂರು ಗ್ರಾಮ್, ಸೇರಕ್ಕಿ ಕಡುಬು ಎನ್ನುವ ಲೆಕ್ಕಾಚಾರದಲ್ಲಿ ಕಡುಬು ತಯಾರಿ ಇರುತ್ತಿತ್ತು..

ಇದನ್ನು ಮನೆಯ ಕ್ರಿಕೆಟ್ ಟೀಂನ ಸದಸ್ಯರ ಸಂಖ್ಯೆ ಯಷ್ಟೇ ಅಲ್ಲದೆ, ಒಂದು ತಂಡದ ವಾಲಿಬಾಲ್ ಸಂಖ್ಯೆ ಯ ಪರಿಚಾರಕರ ಮನೆಗೆ ಬೇಕಾಗುವಷ್ಟು, ತಯಾರಿ ಮಾಡಿ, ಕೆಲವೊಮ್ಮೆ ಬಾರಿ ಅಟ್ಟದಲ್ಲಿ ಬೇಯಿಸುವ ಪರಿಸ್ಥಿತಿ ಇರುತ್ತಿತ್ತು. ಈ ಕಡುಬು ರೆಫ್ರಿಜರೇಟರ್ ಇಲ್ಲದ ಕಾಲದಲ್ಲಿ ಕನಿಷ್ಠ ಎರಡು ದಿನ ತನ್ನ ಮೆರುಗನ್ನು ತೋರಿಸಿಯೇ ವಿರಮಿಸುತ್ತಿತ್ತು. ಕಡುಬು ಚಟ್ನಿ, ಹಾಗೆಯೇ ಬೇರೆ ಬೇರೆ ಸಹ ಪದಾರ್ಥ ಗಳಾದ, ಸಾರು, ತೊವೆ, ಸಾಂಬಾರ್, ಪಾಯಸ, ಅಂತಿಮವಾಗಿ ತಿಂದದ್ದನ್ನು ಅರಗಿಸಲು ಮೊಸರು, ಶುಂಠಿ, ಹಸಿಮೆಣಸಿನ ಮಜ್ಜಿಗೆಯೊಂದಿಗೆ, ಕೆಲ ವೊಮ್ಮೆ ತೆಂಗಿನ ಎಣ್ಣೆ, ಮಾವಿನ ಮಿಡಿ ಉಪ್ಪಿನಕಾಯಿಯ ರಸ, ಬಹುತೇಕ ತುಪ್ಪದ ಪರಿಮಳದಲ್ಲೇ , ಅಬ್ಬರಿಸಿ ಮಾಯವಾಗುತ್ತಿತ್ತು..

ಮೂರು ಹೊತ್ತು, ಇದನ್ನು ತಿಂದು, ತಮಸ್ಸು ಏರಿ ಅನಿವಾರ್ಯವಾಗಿ ಮಲಗಲೇ ಬೇಕಾದ, ಕಡುಬಿಗೆ ಈ ರೀತಿ ಮಣಿಯಬೇಕಾಗುತ್ತಿತ್ತು

ಲೇಖನ : ಡಾ ಎಂ ವಿ ಹೊಳ್ಳ.. ಮಣೂರು