ಉಡುಪಿ: ಕಾರ್ಕಳ ತಾಲೂಕು ಮೀಯಾರು ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮೀಡಿಯಂ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆ ನೀಡಿದ ಆರೋಪದಡಿ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕ ಮದರಸ್ ಮಕಾಂದಾರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ. ಕಲಬುರ್ಗಿ ಮೂಲದ ಶಿಕ್ಷಕ ಮದರಸ್ ಮಕಾಂದಾರ್ ವಜಾಗೊಂಡಿರುವವರು.

ಮೂಲಗಳ ಪ್ರಕಾರ, ಶಾಲೆಯ ಕೆಲ ವಿದ್ಯಾರ್ಥಿಗಳಿಗೆ ನಿರಂತರವಾಗಿ ಬಸ್ಕಿ ಹೊಡೆಯುತ್ತಿದ್ದರು ಎನ್ನುವ ಆರೋಪಗಳು ಕೇಳಿ ಬಂದಿತ್ತು. ಜೊತೆಗೆ, ಕೆಲವು ವಿದ್ಯಾರ್ಥಿಗಳು ಧರಿಸುವ ಜನಿವಾರ ಮತ್ತು ಕೈದಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳು ನಡೆಸಿದರೆಂಬ ದೂರೂ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಶಾಲಾ ವಲಯದ ಮೂಲಗಳ ಮಾಹಿತಿ ಪ್ರಕಾರ, ಈ ಬಗ್ಗೆ ಪ್ರಾಂಶುಪಾಲರು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಬದಲಾವಣೆಯಾದ ಹಿನ್ನಲೆಯಲ್ಲಿ ಶಿಕ್ಷಕನನ್ನು ಕರ್ತವ್ಯದಿಂದ ವಜಾ ಕ್ರಮ ಕೈಗೊಳ್ಳಲಾಗಿದೆ. ಆರೋಪಗಳ ಕುರಿತು ತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಧಿಕೃತ ವರದಿ ಅಥವಾ ಇಲಾಖಾ ತನಿಖೆಯ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.



