ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಮಹಿಳೆ ಹಲ್ಲೆ ಪ್ರಕರಣ ವಿಚಾರವಾಗಿ ಮೀನುಗಾರ ಮಹಿಳೆಯರ ಬಂಧನ ವಿರೋಧಿಸಿ ಮಲ್ಪೆ ಬಂದರಿನಲ್ಲಿ ಇಂದು ಆಯೋಜಿಸಲಾಗಿದ್ದ ಪ್ರತಿಭಟನ ಸಭೆಯಲ್ಲಿ ಮೀನುಗಾರಿಕಾ ಮಹಿಳೆಯ ಮೇಲಿನ ಜಾತಿ ನಿಂದನೆ ಪ್ರಕರಣ ಕೈ ಬಿಡಬೇಕು ಇಲ್ಲವಾದರೆ ಉಗ್ರಪ್ರತಿಭಟನೆ ಎದುರಿಸಿ ಎನ್ನುವ ಒಕ್ಕೊರಲಿನ ಕೂಗು ಕೇಳಿ ಬಂತು. ಇದರ ನಡುವೆ ಪ್ರತಿಭಟನ ಸಭೆಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಕುರಿತು ಹೇಳಿಕೆ ನೀಡಿದ ಪರಿಣಾಮ ಸಭೆಯಲ್ಲಿ ಕೋಲಾಹಲ ಉಂಟಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮಲ್ಪೆ ಬಂದರು ಲಕ್ಷಾಂತರ ಜನರಿಗೆ ಬಂಗಾರದ ಬಟ್ಟಲಾಗಿದೆ. ಇಲ್ಲಿ ದುಡಿದು ತಿನ್ನುವ ವರ್ಗವಿದ್ದು, ಸಾವಿರಾರು ಜನರಿಗೆ ಉದ್ಯೋಗ ದೊರಕಿದೆ. ಬಂದರಿನಲ್ಲಿ ನಡೆದ ಘಟನೆಯನ್ನು ವಿರೋಧಿಸುವ ದಲಿತ ನಾಯಕರ ಕುಟುಂಬಗಳು ಉದ್ದಾರ ಆಗಿದ್ದು ಮಲ್ಪೆ ಬಂದರಿನಿಂದ ಎಂಬುದನ್ನು ಯಾರು ಮರೆಯುವಂತಿಲ್ಲ. ಇಲ್ಲಿ ಜಾತಿ, ಭೇದವಿಲ್ಲದ ಸೌಹಾರ್ದವಾಗಿ ಕೆಲಸ ನಡೆಯುತ್ತಿದೆ. ಈ ಜಿಲ್ಲೆಯಲ್ಲಿ ಅಣ್ಣಾಮಲೈ ಸೇರಿದಂತೆ ಅನೇಕ ದಕ್ಷ ಅಧಿಕಾರಿಗಳು ಎಸ್ಪಿಯಾಗಿ ಹೋಗಿದ್ದಾರೆ. ಆದರೆ ಅವರೆಂದಿಗೂ ಮಾನವೀಯತೆ ಬಿಟ್ಟು ವರ್ತಿಸಿಲ್ಲ. ಇವನು ಯಾವ ಲೆಕ್ಕ. ಈ ಎಸ್ಪಿಗೆ ಮನುಷ್ಯತ್ವವೇ ಇಲ್ಲ. ಅಮಾಯಕ ಮೀನುಗಾರ ಮಹಿಳೆಯನ್ನು ಬಂಧಿಸುವ ದಾಷ್ಟ್ಯ ತೋರಿಸುವ ಎಸ್ಪಿ ನಮಗೆ ಬೇಡ. ಅವನನ್ನು ವರ್ಗಾವಣೆ ಮಾಡಬೇಕು. ನಮ್ಮ ಮನೆಗೆ ಕಳ್ಳರು ಬಂದರೆ ಕಟ್ಟಿ ಹಾಕುವುದಿಲ್ಲವೇ, ಕಳ್ಳರನ್ನು ಕಟ್ಟಿ ಹಾಕದೆ ಮತ್ತೇನು ಮಾಡಬೇಕು. ಆದರೆ ಕಳ್ಳತನದ ಆರೋಪವಿರುವ ಮಹಿಳೆಗೆ ತಲ್ವಾರು, ಖಡ್ಗದಿಂದ ಹಲ್ಲೆ ನಡೆಸಿದ್ದಾರಾ…? ಮತ್ಯಾಕೆ ಪೋಲಿಸರು ಅಮಾಯಕ ಮೀನುಗಾರ ಮಹಿಳೆಯರ ಮೇಲೆ ಪೌರುಷ ತೋರಿಸಿರುವುದು. ಮೀನುಗಾರಿಕೆ, ಬಂದರಿನ ಬಗ್ಗೆ ಏನೆಂದೇ ತಿಳಿಯದವರು ಉಸ್ತುವಾರಿ ಮಂತ್ರಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತುಕೊಂಡು ದಿಗ್ಭ್ರಮೆಯಾಗಿದೆ ಎಂದು ಹೇಳಿಕೆ ಕೊಡುತ್ತಾರೆ. ಆದರೆ ಸಿಎಂ ಅವರ ತವರೂರು ಮೈಸೂರಿನಲ್ಲಿ 300 ಮಂದಿ ಸೇರಿ ಪೊಲೀಸ್ ಸ್ಟೇಷನ್‌ಗೆ ಬೆಂಕಿ ಹಾಕಿದಾಗ ಸಿದ್ದರಾಮಯ್ಯಗೆ ದಿಗ್ಭ್ರಮೆ ಆಗಿಲ್ಲವಾ..? ಎಂದು ಪ್ರಶ್ನಿಸಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಬಿಜೆಪಿ ಮುಖಂಡ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಕುರಿತು ಮಾತನಾಡುತ್ತಾ, ಕೆಲವು ವರ್ಷಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಇದೇ ರೀತಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದಾಗಿ ನಮ್ಮ ಮೀನುಗಾರರಿಗೆ ಸಮಸ್ಯೆಯಾಗುತ್ತದೆ ಎಂದು ಆಗಿನ ಕಾಂಗ್ರೆಸ್ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ನಂಬಿಕೊಂಡು ಪ್ರತಿಭಟನೆ ನಡೆಸಿದ್ದೆವು. ಪ್ರತಿಭಟನೆ ನಡೆಸಿದ ನಮ್ಮ ಮೇಲೆ ಅಂದಿನ ಎಸ್ ಪಿ ಅವರು ಲಾಟಿ ಚಾರ್ಜ್ ನಡೆಸಿದ್ದರು ಇವತ್ತಿಗೂ ಆ ಕೇಸಿನ ವಿಚಾರಣೆ ನಡೆಯುತ್ತಿದೆ. ಅಂದು ನಮ್ಮ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ಇಂದು ಪ್ರತಿಭಟನ ಸಭೆಯಲ್ಲಿ ತೋರಿಸಿದ ಆಕ್ರೋಶ ತೋರಿಸಿಲ್ಲ. ಹಾಗಾಗಿ ನನ್ನನ್ನು ಸೇರಿದಂತೆ ಯಾವುದೇ ರಾಜಕೀಯ ಮುಖಂಡರ ಮಾತುಗಳನ್ನು ನಂಬಬೇಡಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವವರನ್ನ ಮಾತ್ರ ನಂಬಿ ಎಂದಿದ್ದಾರೆ. ರಮೇಶ್ ಕಾಂಚನ್ ಮಾಡು ಮುಗಿಸುವ ಮೊದಲೆ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿದ್ದ ಕೆಲವರು ಆಕ್ರೋಶಗೊಂಡು ವೇದಿಕೆಯತ್ತ ನುಗ್ಗಿ ಬಂದಿದ್ದಾರೆ. ಹಳೆಯ ರಾಜಕೀಯ ವಿಚಾರವನ್ನು ತೆಗೆದು ರಾಜಕೀಯ ಮಾಡುವುದನ್ನು ನಿಲ್ಲಿಸಿ ಎನ್ನುವ ಘೋಷಣೆ ಕೂಗಿ, ಪ್ರತಿಭಟನಾ ಸಭೆಯ ಮೂಲ ಉದ್ದೇಶದ ಕುರಿತು ಪ್ರತಿಭಟನಾ ಕಾರರು ಎಚ್ಚರಿಸಿದರು. ಪರಿಸ್ಥಿತಿ ಕೈಮೀರಿ ಹೋಗುವುದನ್ನು ಗಮನಿಸಿದ ಮೀನುಗಾರಿಕಾ ಮುಖಂಡರು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಅವರನ್ನು ಪೊಲೀಸ್ ಭದ್ರತೆಯಲ್ಲಿ ಸಭೆಯಿಂದ ಹೊರಗೆ ಕಳುಹಿಸಿದ್ದಾರೆ.

ಈ ಘಟನೆಯಿಂದ ಪ್ರತಿಭಟನಾ ಸಭೆಯಲ್ಲಿ ಕೊಂಚ ಹೊತ್ತು ಗಲಿಬಿಲಿ ಉಂಟಾಯಿತು. ಬಳಿಕ ಮೂಲ ಉದ್ದೇಶಕ್ಕೆ ಮರಳಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್, ಮಲ್ಪೆ ಬಂದರಿನಲ್ಲಿ ಘಟನೆ ನಡೆದಿದ್ದು ದುರದೃಷ್ಟಕರ ಸಂಗತಿ. ದುಡಿದು ಕಷ್ಟ ಪಟ್ಟು ತಂದ ಮೀನು ಅದನ್ನು ಕದ್ದು ಹೋಗುವುದು ದೊಡ್ಡ ತಪ್ಪು. ಕದ್ದು ಸಿಕ್ಕಿ ಬಿದ್ದ ಮಹಿಳೆಯನ್ನು ಕಟ್ಟಿ ಹಾಕಿದ್ದು ವೈರಲ್ ಆದದ್ದು ದುರದೃಷ್ಟಕರ. ಆದರೆ ಸರಕಾರ ನಡೆದುಕೊಂಡ ರೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕಳ್ಳತನ ಮಾಡಿ ಕೈಗೆ ಸಿಕ್ಕಾಗ ಮೊದಲು ಥಳಿಸುತ್ತಾರೆ. ಆದರೆ ಮಲ್ಪೆ ಬಂದರಿನಲ್ಲಿ ಒಂದು ವ್ಯವಸ್ಥೆ ಇದೆ. ಕರೆಸಿ ಮಾತುಕತೆ ನಡೆಸಿ ರಾಜಿಯಾದ ಬಳಿ ಅಟ್ರಾಸಿಟಿ ಕೇಸ್ ಹಾಕಲಾಗಿದೆ. ಇಲ್ಲಿ ಯಾರು ಕೂಡ ಜಾತಿ ನಿಂದನೆ ಮಾಡಿಲ್ಲಾ ಹಾಗಾಗಿ ಪೊಲೀಸ್ ರು ಅಟ್ರಾಸಿಟಿ ಕೇಸ್ ವಾಪಾಸ್ ಪಡೆಯಬೇಕು ಎಂದರು.

ಪ್ರತಿಭಟನಾ ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ಭಾಗವಹಿಸಿ ಮೀನುಗಾರರಿಗೆ ಅದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಸದಾ ಜೊತೆಗಿರುವ ಭರವಸೆ ನೀಡಿದರು. ಪ್ರತಿಭಟನೆಯ ಬಳಿಕ ಅಪರ ಜಿಲ್ಲಾಧಿಕಾರಿ ಆಬಿದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ಮಹಿಳಾ ಮೀನುಗಾರರ ಮೇಲೆ ಹಾಕಿರುವ ಜಾತಿ ನಿಂದನೆ ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆದು ಎರಡು ದಿನಗಳಲ್ಲಿ ಅವರಿಗೆ ಜಾಮೀನು ಸಿಗುವಂತೆ ಆಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಅಥವಾ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎನ್ನುವ ಅಭಿಪ್ರಾಯ ಮೂಡಿ ಬಂತು.

ಸಭೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ವಿವಿಧ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾವಿರಾರು ಮೀನುಗಾರರು ಉಪಸ್ಥಿತರಿದ್ದರು.