Thursday, October 23, 2025

spot_img

ಮೀನುಗಾರಿಕಾ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ: ಮಾಂಕಾಳ ವೈದ್ಯ

ಉಡುಪಿ : ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ದವಾಗಿದೆ. ಅದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಅನುದಾನವನ್ನು ಸರ್ಕಾರವು ಕಲ್ಪಿಸಲಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ ವೈದ್ಯ ತಿಳಿಸಿದರು. ಅವರು ಮಲ್ಪೆಯ ಮೀನುಗಾರಿಕಾ ಬಂದರು ಆವರಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾದ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ಸೇರಿದಂತೆ ಅದಕ್ಕೆ ಪೂರಕವಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನನ್ನ ಕ್ಷೇತ್ರದ 20 ಸಾವಿರಕ್ಕೂ ಹೆಚ್ಚು ಜನ ಇಲ್ಲಿನ ಮೀನುಗಾರಿಕಾ ಚಟುವಟಿಕೆಗಳನ್ನು ಅವಲಂಬಿಸಿದ್ದಾರೆ. ಮಲ್ಪೆಯು ದೇಶದಲ್ಲಿಯೇ ಅತಿ ಹೆಚ್ಚು ಮೀನುಗಾರಿಕಾ ಉತ್ಪನ್ನಗಳನ್ನು ಮಾಡುವ ಬಂದರಾಗಿದ್ದು ಇಲ್ಲಿನ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ಬಳಕೆ ಮಾಡುವುದರೊಂದಿಗೆ ಇಲ್ಲಿನ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಒಂದೊಮ್ಮೆ ಕೇಂದ್ರ ಸರ್ಕಾರ ಅನುದಾನ ನೀಡದಿದ್ದಲ್ಲಿ ನಮ್ಮ ಸರ್ಕಾರವೇ ಅನುದಾನ ಭರಿಸುವುದರೊಂದಿಗೆ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದು ಎಂದರು.

ಕಳೆದ ಸಾಲುಗಳಲ್ಲಿ ಬಂದರುಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಬಂದಿರುವ ಅನುದಾನವು ಸಿ.ಆರ್.ಜೆಡ್ ನ ಕೆಲವು ನಿಯಮಾವಳಿಗಳಿಂದಾಗಿ ಬಳಕೆ ಮಾಡಿಕೊಳ್ಳಲು ಕಷ್ಟಸಾಧ್ಯವಾಗಿ ವಾಪಾಸು ಹೋಗಿದೆ. ರಾಜ್ಯ ಸರ್ಕಾರವು ಸಿ.ಆರ್.ಜೆಡ್.ನ ನಿಯಮಾವಳಿಗಳನ್ನು ನೆರೆಯ ರಾಜ್ಯಗಳಾದ ಗೋವಾ ಮತ್ತು ಕೇರಳದಲ್ಲಿ ಇರುವ ಹಾಗೆ ಮಾಡಿಕೊಟ್ಟಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಒಂದೇ ಥರದ ನಿಯಮಾವಳಿಗಳು ಇರುವುದು ಒಳಿತು. ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಸಿ.ಆರ್.ಜೆಡ್ ನ ನಿಯಮಾವಳಿಗಳನ್ನು ಬದಲಾಯಿಸಲು ಮನವಿ ಮಾಡಿದೆ. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ಇದರಿಂದ ಮೀನುಗಾರಿಕೆ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆಯು ಸರ್ವಋತು ಬಂದರಾಗಿದ್ದು ಹೆಚ್ಚು ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೀನುಗಾರಿಕಾ ದೋಣಿಗಳು ಹೆಚ್ಚಾದ ಕಾರಣ ಮೀನುಗಾರಿಕಾ ಬೋಟ್‌ಗಳ ನಿಲುಗಡೆಗೆ ವಿಸ್ತರಣೆ ಅಗತ್ಯವಿದೆ. ಇದರ ಜೊತೆಗೆ ಬಂದರಿನ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಮಾನ್ಯ ಮೀನುಗಾರಿಕಾ ಮಂತ್ರಿಗಳು ಸ್ಥಳೀಯ ಮೀನುಗಾರರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ಅನುಕೂಲವಾಗುವ ರೀತಿ ಸಭೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.

ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ ಮತ್ಸ್ಯ ಸಂಪದಾ ಯೋಜನೆಯು ಮೀನುಗಾರರಿಗೆ ಶಕ್ತಿ ತುಂಬಿದೆ. ಈ ಯೋಜನೆಯ ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು. ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿದಲ್ಲಿ ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಲಿದೆ ಎಂದ ಅವರು, ಜಿಲ್ಲೆಯಲ್ಲಿ ಜಟ್ಟಿಗಳ ನಿರ್ಮಾಣ ಹಾಗೂ ಹೂಳೆತ್ತುವುದಕ್ಕೂ ಹೆಚ್ಚು ಗಮನ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮೀನುಗಾರಿಕೆ ಅಪರ ನಿರ್ದೇಶಕ ಸಿದ್ದಯ್ಯ ಡಿ, ಮೀನುಗಾರಿಕಾ ಉಪನಿರ್ದೇಶಕಿ ಸವಿತಾ ಖಾದ್ರಿ ಎಸ್.ಕೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles