ಉಡುಪಿ: ಉಡುಪಿ ನಗರದ ಮಿಷನ್ ಕಾಂಪೌಂಡ್ ಪ್ರದೇಶದಲ್ಲಿ ಮಾರ್ಚ್ 20, 21 ಹಾಗೂ 22ರಂದು ತಮಿಳುನಾಡಿನ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಆಯೋಜಿಸಲು ಉದ್ದೇಶಿಸಿರುವ ‘ಸಮಾಧಾನ ಮಹೋತ್ಸವ’ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೋಹನ್ ಸಿ. ಲಾಝರಸ್ ಅವರು ಈ ಹಿಂದೆ ಹಿಂದೂ ದೇವಾಲಯಗಳನ್ನು “ಸೈತಾನನ ನೆಲೆಗಳು” ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಈ ಸಂಬಂಧ ತಮಿಳುನಾಡಿನ ಹಲವು ಪೊಲೀಸ್ ಠಾಣೆಗಳಲ್ಲಿ ಐಪಿಸಿ ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಲಾಝರಸ್ ಅವರ ‘ಜೀಸಸ್ ರಿಡೀಮ್ಸ್’ ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ವಿದೇಶಿ ಹಣವನ್ನು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 2024ರ ಮಾರ್ಚ್ನಲ್ಲಿ ಸಂಸ್ಥೆಯ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.‘ಸಮಾಧಾನ ಮಹೋತ್ಸವ’ದ ಹೆಸರಿನಲ್ಲಿ ಬಲವಂತದ ಮತಾಂತರಕ್ಕೆ ಯತ್ನ ನಡೆಯುವ ಸಾಧ್ಯತೆ ಇದೆ ಎಂದು ಆರೋಪಿಸಿದ ಅವರು, ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು. ಜಿಲ್ಲೆಯ ಸಂಸ್ಕೃತಿ ಹಾಗೂ ಸಭ್ಯತೆಗೆ ಭಂಗ ತರುವಂತಹ ಚಟುವಟಿಕೆಗಳನ್ನು ಸಂಘಟಕರು ಕೈಬಿಡಬೇಕು. ಜಿಲ್ಲಾಡಳಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ವಿಜಯ್ ಕೊಡ್ವೂರು, ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ರಾಜೇಶ್ ಉಚ್ಚಿಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.



