Friday, March 6, 2026

spot_img

‘ಮಿದುಳು ತಿನ್ನುವ ಅಮೀಬಾ’ ಶಬರಿಮಲೆ ಯಾತ್ರಿಕರಿಗೆ ಆರೋಗ್ಯ ಇಲಾಖೆ ಎಚ್ಚರಿಕೆ.!

ಉಡುಪಿ : ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಎಂದು ಕರೆಯಲ್ಪಡುವ ನೇಗ್ಲೇರಿಯಾ ಫೌಲೇರಿ (Naegleria fowleri) ಸೋಂಕಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ, ಶಬರಿಮಲೆ ಯಾತ್ರೆಗೆ ತೆರಳುವ ರಾಜ್ಯದ ಯಾತ್ರಿಕರು ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ಎಚ್ಚರಿಕೆ ನೀಡಿದೆ.

 ಈ ಅಮೀಬಾದಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್ ಅಪರೂಪದಾದರೂ ಅತ್ಯಂತ ಗಂಭೀರ ಮತ್ತು ಜೀವಕ್ಕೆ ಅಪಾಯಕಾರಿಯಾದ ಸೋಂಕಾಗಿದ್ದು, ಯಾತ್ರಿಕರು ನೀರಿನ ಮೂಲಗಳ ಸಂಪರ್ಕದಲ್ಲಿರುವಾಗ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಲಾಖೆ ಸೂಚಿಸಿದೆ.

ಆಯುಕ್ತಾಲಯ ಬಿಡುಗಡೆ ಮಾಡಿದ ಮಾರ್ಗಸೂಚಿಗಳ ಪ್ರಕಾರ,  ನೇಗ್ಲೇರಿಯಾ ಫೌಲೇರಿ ಎಂಬುದು ಬೆಚ್ಚಗಿನ ಸಿಹಿನೀರು ಮತ್ತು ಮಣ್ಣಿನಲ್ಲಿ ಕಂಡುಬರುವ ಸ್ವತಂತ್ರ ಅಮೀಬಾ. ಕೊಳಗಳು, ಕೆರೆಗಳು, ನಿಂತ ನೀರು, ಈಜುಕೊಳಗಳು ಇತ್ಯಾದಿ ಸ್ಥಳಗಳಲ್ಲಿ ಇದರ ಅಸ್ತಿತ್ವ ಹೆಚ್ಚು. ಈ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ, ಕಲುಷಿತ ನೀರನ್ನು ಕುಡಿಯುವುದರಿಂದಲೂ ಹರಡುವುದಿಲ್ಲ. ನೀರು ಮೂಗಿಗೆ ಹೋದಾಗ ಅಮೀಬಾ ಮೆದುಳಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಇದರಿಂದ ತೀವ್ರ, ಮಾರಣಾಂತಿಕ ಮೆದುಳು ಸೋಂಕು ಉಂಟಾಗಬಹುದು.

 ಯಾತ್ರಿಕರು ನಿಂತ ನೀರಿನಲ್ಲಿ ಸ್ನಾನ ಮಾಡುವ ವೇಳೆಯಲ್ಲಿ ಮೂಗಿನ ಕ್ಲಿಪ್‌ಗಳನ್ನು ಬಳಸುವುದು ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿಕೊಳ್ಳುವುದು ಸೋಂಕು ತಡೆಯಲು ಅತ್ಯವಶ್ಯಕ ಎಂದು ಇಲಾಖೆ ಸಲಹೆ ನೀಡಿದೆ. ಸೋಂಕಿನ ಸಂಭವನೀಯ ನೀರಿನ ಸಂಪರ್ಕದ ಏಳು ದಿನಗಳೊಳಗೆ ಕೆಳಕಂಡ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿದೆ.

ಜ್ವರ. ತೀವ್ರ ತಲೆನೋವು, ವಾಕರಿಕೆ, ವಾಂತಿ, ಕುತ್ತಿಗೆ ಬಿಗಿತ,  ಗೊಂದಲ ಅಥವಾ ವರ್ತನೆಯಲ್ಲಿ ಬದಲಾವಣೆಗಳು ಯಾವುದೇ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸದೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ವೈದ್ಯರನ್ನು ತಕ್ಷಣ ಸಂಪರ್ಕಿಸುವಂತೆ ಆಯುಕ್ತಾಲಯ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles